Share News

ಬೆಂಗಳೂರು: ರಾಜ್ಯದ 31ನೇ ನೂತನ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದಿರುವ ವಿಜಯನಗರ ಜಿಲ್ಲೆಯಲ್ಲಿ ಇದುವರೆಗೆ ‘ಜಿಲ್ಲಾ ಪೊಲೀಸ್ ದೂರುಗಳ ಪ್ರಾಧಿಕಾರ’ ರಚನೆಯಾಗದಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯ ಮೋಹನ್ ಕುಮಾರ್ ದಾನಪ್ಪ, ಕೂಡಲೇ ಪ್ರಾಧಿಕಾರವನ್ನು ರಚಿಸುವಂತೆ ಒಳಾಡಳಿತ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಅಧಿಕೃತ ಪತ್ರ ಬರೆದು ಒತ್ತಾಯಿಸಿದ್ದಾರೆ.

​ಪ್ರಾಧಿಕಾರದ ಹಿನ್ನೆಲೆ ಹಾಗೂ ಕಾರ್ಯವ್ಯಾಪ್ತಿ

​ಸುಪ್ರೀಂ ಕೋರ್ಟ್‌ನ ನಿರ್ದೇಶನಗಳಂತೆ ಹಾಗೂ ಕರ್ನಾಟಕ ಪೊಲೀಸ್ ಕಾಯ್ದೆ-1963ಕ್ಕೆ ತಿದ್ದುಪಡಿ ತರುವ ಮೂಲಕ 2013ರಲ್ಲಿ ರಾಜ್ಯ ಹಾಗೂ ಜಿಲ್ಲಾ ಪೊಲೀಸ್ ದೂರುಗಳ ಪ್ರಾಧಿಕಾರಗಳು ಅಸ್ತಿತ್ವಕ್ಕೆ ಬಂದಿದ್ದವು.

​ರಾಜ್ಯ ಪ್ರಾಧಿಕಾರ: ಹೆಚ್ಚುವರಿ ಪೊಲೀಸ್ ಅಧೀಕ್ಷಕರು (Addl. SP) ಮತ್ತು ಅದಕ್ಕಿಂತ ಮೇಲ್ಪಟ್ಟ ಅಧಿಕಾರಿಗಳ ವಿರುದ್ಧದ ದೂರುಗಳನ್ನು ವಿಚಾರಣೆ ನಡೆಸುತ್ತದೆ.

​ಜಿಲ್ಲಾ ಪ್ರಾಧಿಕಾರ: ಡಿವೈಎಸ್‌ಪಿ ಮತ್ತು ಅದಕ್ಕಿಂತ ಕೆಳದರ್ಜೆಯ ಅಧಿಕಾರಿ ಹಾಗೂ ಸಿಬ್ಬಂದಿಗಳ ವಿರುದ್ಧ ಪೊಲೀಸ್ ಅಭಿರಕ್ಷೆಯಲ್ಲಿ ಸಾವು, ಗಂಭೀರ ಸ್ವರೂಪದ ಗಾಯ, ಅತ್ಯಾಚಾರ ಅಥವಾ ಯತ್ನ, ಹಾಗೂ ಅಕ್ರಮ ಬಂಧನದಂತಹ ಪ್ರಕರಣಗಳ ದೂರುಗಳ ವಿಚಾರಣೆ ನಡೆಸುವ ಅಧಿಕಾರ ಹೊಂದಿದೆ. ಪ್ರಸ್ತುತ ರಾಜ್ಯದ ಇತರೆ 30 ಜಿಲ್ಲೆಗಳಲ್ಲಿ ಈ ಪ್ರಾಧಿಕಾರಗಳು ಕಾರ್ಯನಿರ್ವಹಿಸುತ್ತಿವೆ.

​ವಿಜಯನಗರ ಜಿಲ್ಲೆಯ ಸಾರ್ವಜನಿಕರ ಪರದಾಟ

​2021ರಲ್ಲಿಯೇ ವಿಜಯನಗರ ನೂತನ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದಿದ್ದು, ಜಿಲ್ಲಾ ಮಟ್ಟದ ಎಲ್ಲಾ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ಇಲ್ಲಿಯವರೆಗೆ ‘ಜಿಲ್ಲಾ ಪೊಲೀಸ್ ದೂರುಗಳ ಪ್ರಾಧಿಕಾರ’ ರಚನೆಯಾಗಿಲ್ಲ. ಪರಿಣಾಮವಾಗಿ, ವಿಜಯನಗರ ಜಿಲ್ಲೆಯ ಪೊಲೀಸ್ ಸಿಬ್ಬಂದಿ ವಿರುದ್ಧದ ದೂರುಗಳು ರಾಜ್ಯ ಪ್ರಾಧಿಕಾರಕ್ಕೆ ಬರುತ್ತಿದ್ದು, ಅಲ್ಲಿಂದ ಅವುಗಳನ್ನು ಇಂದಿಗೂ ಬಳ್ಳಾರಿ ಜಿಲ್ಲಾ ಪ್ರಾಧಿಕಾರಕ್ಕೆ ವರ್ಗಾಯಿಸಲಾಗುತ್ತಿದೆ. ಇದರಿಂದಾಗಿ ವಿಜಯನಗರ ಜಿಲ್ಲೆಯ ಸಾರ್ವಜನಿಕರು ದೂರು ದಾಖಲಿಸಲು ಹಾಗೂ ವಿಚಾರಣೆಗೆ ಹಾಜರಾಗಲು ಬಳ್ಳಾರಿಗೆ ಅಲೆಯುವ ಅನಿವಾರ್ಯತೆ ಎದುರಾಗಿದೆ.

​ಪಾರದರ್ಶಕತೆ ಮತ್ತು ಸುಲಭ ಸೇವೆಗಾಗಿ ಆಗ್ರಹ

​ಪೊಲೀಸ್ ಇಲಾಖೆಯ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಬಲಪಡಿಸುವುದು, ಹಾಗೂ ಸಾರ್ವಜನಿಕರಿಗೆ ಸ್ಥಳೀಯ ಮಟ್ಟದಲ್ಲೇ ಸುಲಭವಾಗಿ ದೂರು ಸಲ್ಲಿಸಲು ಅವಕಾಶ ಕಲ್ಪಿಸುವುದು ಜಿಲ್ಲಾ ಪ್ರಾಧಿಕಾರದ ಮುಖ್ಯ ಉದ್ದೇಶವಾಗಿರುವುದರಿಂದ, ತಕ್ಷಣವೇ ನೂತನ ವಿಜಯನಗರ ಜಿಲ್ಲಾ ಪೊಲೀಸ್ ದೂರುಗಳ ಪ್ರಾಧಿಕಾರವನ್ನು ರಚಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮೋಹನ್ ಕುಮಾರ್ ದಾನಪ್ಪ ಅವರು ಮನವಿ ಮಾಡಿದ್ದಾರೆ.


Share News