ಯಾದಗಿರಿ: ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಣಿ ದೇವಸ್ಥಾನ ಮತ್ತು ಮನೆ ಕಳ್ಳತನ ಪ್ರಕರಣಗಳನ್ನು ಭೇದಿಸುವಲ್ಲಿ ಸ್ಥಳೀಯ ಪೊಲೀಸರು ಯಶಸ್ವಿಯಾಗಿದ್ದಾರೆ. ಒಟ್ಟು 8 ಪ್ರಕರಣಗಳನ್ನು ಪತ್ತೆ ಹಚ್ಚಿ, ಐವರು ಆರೋಪಿಗಳನ್ನು ಬಂಧಿಸಿ ಅವರಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಪೃಥ್ವಿಕ್ ಶಂಕರ IPS ತಿಳಿಸಿದರು.
ಅವರು ತಮ್ಮ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದರು.
ದೇವಸ್ಥಾನದ ಹುಂಡಿ ಹಾಗೂ ಚಿನ್ನ ಕಳವು ಪ್ರಕರಣ ಪತ್ತೆ:
ಕಳೆದ ಆಗಸ್ಟ್ 11-12ರ ರಾತ್ರಿ ಶಹಾಪುರದ ವಿದ್ಯಾನಗರ ಏರಿಯಾದ ಪೂಜೆ ಮಾಡುವ ಮರೆಮ್ಮ ದೇವಿ ಗುಡಿಯ ಬೀಗ ಮುರಿದು ದೇವಿಯ ಮೇಲಿದ್ದ ಆಭರಣಗಳನ್ನು ದುಷ್ಕರ್ಮಿಗಳು ದೋಚಿದ್ದರು. ಈ ಕುರಿತು ಮೌನೇಶ ನಾಟೇಕಾರ ನೀಡಿದ ದೂರಿನ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಎಸ್ಪಿ ಪೃಥ್ವಿಕ್ ಶಂಕರ ಹಾಗೂ ಡಿವೈಎಸ್ಪಿ ಶಿವರಾಜ ಕಟಕಬಾವಿ ಅವರ ಮಾರ್ಗದರ್ಶನದಲ್ಲಿ ಪಿಐ ಎಸ್.ಎಂ.ಪಾಟೀಲ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಅಕ್ಟೋಬರ್ 12ರ ಮುಂಜಾನೆ ದೇವಿನಗರ ಏರಿಯಾದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಮೂವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ಸರಣಿ ಕೃತ್ಯಗಳು ಬೆಳಕಿಗೆ ಬಂದಿವೆ.
ಬಂಧಿತ ಆರೋಪಿಗಳು:
ಮಹೇಶ ತಂದೆ ಶಿವಶೇಖರ ಕಂಬದ (19), ಶಿರವಾಳ
ನಾಗರಾಜ ತಂದೆ ವಿರೇಶ ಅಂಗಡಿ (18), ಗಾಂಧಿ ಚೌಕ ಶಹಾಪುರ
ವಿಕಾಸ್ ತಂದೆ ಮಲ್ಲಣ್ಣ ತಿಂಥಣಿ (18), ಚಾಮುಂಡೇಶ್ವರಿ ನಗರ
ಈ ಆರೋಪಿಗಳಿಂದ ಶಹಾಪುರ ಠಾಣೆಯ 6 ಪ್ರಕರಣಗಳು ಹಾಗೂ ಕೆಂಭಾವಿ ಠಾಣೆಯ ಪ್ರಕರಣಗಳು ಪತ್ತೆಯಾಗಿದ್ದು, ಇವರಿಂದ ₹8 ಲಕ್ಷ ಮೌಲ್ಯದ 80 ಗ್ರಾಂ ಬಂಗಾರವನ್ನು ಜಪ್ತಿ ಮಾಡಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಇಬ್ಬರ ಬಂಧನ:
ಲಕ್ಷ್ಮೀನಗರ ಏರಿಯಾದ ಮನೆಯೊಂದರ ಶೋಕೇಸ್ನಲ್ಲಿದ್ದ ಚಿನ್ನ ಕಳ್ಳತನವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾಗ್ಯಶ್ರೀ ಗುತ್ತೇದಾರ ಹಾಗೂ ರೋಹಿತ್ ಮುಂಡರಗಿ ಅವರನ್ನು ಬಂಧಿಸಿ, ಅವರಿಂದ ₹6.80 ಲಕ್ಷ ಮೌಲ್ಯದ 80 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.
ಒಟ್ಟು 8 ಪ್ರಕರಣಗಳಲ್ಲಿ ₹14.80 ಲಕ್ಷ ಮೌಲ್ಯದ 160 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದ್ದು, ಎಲ್ಲಾ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಎಸ್ಪಿ ತಿಳಿಸಿದರು.
ಪೊಲೀಸ್ ಸಿಬ್ಬಂದಿಯ ಶ್ಲಾಘನೆ:
ಈ ಯಶಸ್ವಿ ಕಾರ್ಯಾಚರಣೆ ನಡೆಸಿದ ಪಿಎಸ್ಐ ಡಿ.ವಿ.ನಾಯಕ್ ಹಾಗೂ ಸಿಬ್ಬಂದಿಯವರಾದ ಗಣಪತಿ, ಮೊಹಮ್ಮದ್ ಜುಬೇರ್, ಮಾನಯ್ಯ, ರವಿಕುಮಾರ್, ಶಿವಲಿಂಗ, ಶಂಕರಲಿಂಗ, ಬಸವರಾಜ, ರಾಮಲಿಂಗಯ್ಯ, ಗಜೇಂದ್ರ, ಭೀಮರಾಯ, ಶರಭಣ್ಣ, ಸಿದ್ರಾಮಯ್ಯ ಹಾಗೂ ಸುರೇಶ (ಸಿಡಿಆರ್ ಘಟಕ) ಅವರ ಕಾರ್ಯತತ್ಪರತೆಯನ್ನು ಎಸ್ಪಿ ಪೃಥ್ವಿಕ್ ಶಂಕರ ಅವರು ವಿಶೇಷವಾಗಿ ಶ್ಲಾಘಿಸಿದರು.
Arakshakara Times Media
Related posts
