ಕೆ.ಜಿ.ಎಫ್: ಜಿಲ್ಲೆಯನ್ನು ಸಂಪೂರ್ಣ ಮಾದಕ ವಸ್ತುಗಳ ಮುಕ್ತ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ಕೆ.ಜಿ.ಎಫ್ ಜಿಲ್ಲಾ ಪೊಲೀಸರು ಕೈಗೊಂಡ ವಿಶೇಷ ಕಾರ್ಯಾಚರಣೆಯಲ್ಲಿ ಬೃಹತ್ ಯಶಸ್ಸು ಸಿಕ್ಕಿದೆ. ಊರಿಗಾಂ ಮತ್ತು ಬಂಗಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಸಿದ ಎರಡು ಪ್ರತ್ಯೇಕ ದಾಳಿಗಳಲ್ಲಿ MDMA ಹಾಗೂ ಗಾಂಜಾ ಮಾದಕ ವಸ್ತುಗಳನ್ನು ವಶಪಡಿಸಿಕೊಂಡು, ಐವರು ಆರೋಪಿಗಳನ್ನು ಬಂಧಿಸಲಾಗಿದೆ.
ಕಾರ್ಯಾಚರಣೆ 1: ಊರಿಗಾಂ ಬಳಿ MDMA ಮಾರಾಟ ಜಾಲ ಭೇದನೆ — 4 ಆರೋಪಿಗಳ ಬಂಧನ
ಅಕ್ಟೋಬರ್ 3ರಂದು ಕೆ.ಜಿ.ಎಫ್-ವಲಗಮಾದಿ ರಸ್ತೆಯ ನೀಲಗಿರಿ ತೋಪಿನಲ್ಲಿ ಮಾದಕ ವಸ್ತು ಮಾರಾಟ ಮತ್ತು ಸೇವನೆಯಲ್ಲಿ ತೊಡಗಿದ್ದ ಗುಂಪಿನ ಮೇಲೆ ಜಿಲ್ಲಾ ಗುಪ್ತ ಶಾಖೆಯ ಇನ್ಸ್ಪೆಕ್ಟರ್ ದಯಾನಂದ್ ಆರ್. ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದಾರೆ.
ಬಂಧಿತ ಆರೋಪಿಗಳು: ಬಂಗಾರಪೇಟೆಯ ಶ್ರೀಜೇಶ್, ಮೊಹಮ್ಮದ್ ಇಸ್ಮಾಯಿಲ್ ಹಾಗೂ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಸಂತೋಪ್ ಮತ್ತು ರೂಪಸ್ ಪಾಲ್. (ನೆರೆಳೆಕರೆ ಗ್ರಾಮದ ಕಿಶೋರ್ ಎಂಬ ಆರೋಪಿ ಪರಾರಿಯಾಗಿದ್ದು, ಆತನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ).
ವಶಪಡಿಸಿಕೊಂಡ ಸೊತ್ತುಗಳು: 12.43 ಗ್ರಾಂ MDMA, ₹1,92,000 ನಗದು ಹಣ, 1 ಬ್ರೇಜಾ ಕಾರ್, 1 ಯೂನಿಕಾರ್ನ್ ಬೈಕ್, 1 ಮ್ಯಾಕ್ಬುಕ್ ಏರ್ ಲ್ಯಾಪ್ಟಾಪ್, 6 ಮೊಬೈಲ್ ಫೋನ್ಗಳು, 2 ಎಲೆಕ್ಟ್ರಾನಿಕ್ ತೂಕದ ಯಂತ್ರಗಳು, ಹಾಗೂ ಮಾದಕ ವಸ್ತು ಸೇವನೆಗೆ ಬಳಸುತ್ತಿದ್ದ ಉಪಕರಣಗಳು.
ಪ್ರಕರಣ: ಊರಿಗಾಂ ಠಾಣೆಯಲ್ಲಿ ಪ್ರಕರಣ (ಮೊ.ಸಂ. 68/2026 NDPS Act) ದಾಖಲಿಸಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕಾರ್ಯಾಚರಣೆ 2: ಬಂಗಾರಪೇಟೆಯಲ್ಲಿ 8 ಕೆಜಿ ಗಾಂಜಾ ಜಪ್ತಿ — ಬಿಹಾರ ಮೂಲದ ಆರೋಪಿ ಬಂಧನ
ಅಕ್ಟೋಬರ್ 4ರಂದು ಬಂಗಾರಪೇಟೆಯ ಫಲವತ್ತಿಮ್ಮನಹಳ್ಳಿ ಸ್ಮಶಾನದ ಬಳಿ ಗಾಂಜಾ ಮಾರಾಟ ಮಾಡಲು ಬಂದಿದ್ದ ಖಚಿತ ಮಾಹಿತಿ ಮೇರೆಗೆ ಬಂಗಾರಪೇಟೆ ಪೊಲೀಸರು ದಾಳಿ ನಡೆಸಿದ್ದಾರೆ.
ಬಂಧಿತ ಆರೋಪಿ: ಬಿಹಾರ ಮೂಲದ ರಾಹುಲ್ ಕುಮಾರ್ ಯಾದವ್ (21).
ಜಪ್ತಿಯಾದ ಗಾಂಜಾ: ಆರೋಪಿಯಿಂದ ₹4,02,000 ಮೌಲ್ಯದ 8 ಕೆಜಿ 100 ಗ್ರಾಂ ಗಾಂಜಾ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣ: ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ (ಮೊ.ಸಂ. 245/2026) ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ.
ಪೊಲೀಸ್ ತಂಡಕ್ಕೆ ಎಸ್ಪಿ ಶ್ಲಾಘನೆ:
ಡಿ.ವೈ.ಎಸ್.ಪಿ ಲಕ್ಷ್ಮಯ್ಯ ವಿ. ಅವರ ಮಾರ್ಗದರ್ಶನದಲ್ಲಿ ಯಶಸ್ವಿ ದಾಳಿ ನಡೆಸಿದ ಇನ್ಸ್ಪೆಕ್ಟರ್ಗಳಾದ ದಯಾನಂದ್ ಆರ್., ರವಿಕುಮಾರ್ ಸಿ., ಹರೀಶ್ ಆರ್., ಪಿ.ಎಸ್.ಐ ರಾಮದಾಸು, ಪಿ.ಎಸ್.ಐ ದೇವರಾಜ್ ಹಾಗೂ ತನಿಖಾ ತಂಡದ ಎಲ್ಲಾ ಸಿಬ್ಬಂದಿಗಳ ಕಾರ್ಯವೈಖರಿಯನ್ನು ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಶಿವಾಂಶು ರಾಜಪೂತ್, IPS ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
Arakshakara Times Media
Related posts
