Share News

ಬೆಂಗಳೂರು: ರಾಜಧಾನಿ ಬೆಂಗಳೂರಿನ ರಾಜರಾಜೇಶ್ವರಿ ನಗರ (ಆರ್.ಆರ್. ನಗರ) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಡುಗೆ ಸಿಲಿಂಡರ್ ಅನಿಲ ಸೋರಿಕೆಯಾಗಿ ಏಕಾಏಕಿ ಭೀಕರವಾಗಿ ಸ್ಫೋಟಗೊಂಡಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ದುರಂತ ಘಟನೆ ಇಂದು ಬೆಳಿಗ್ಗೆ ನಡೆದಿದೆ.

​ಬಿಹಾರ ಮೂಲದ ಬಬ್ಲು, ಪಕ್ಕದ ಮನೆಯ ನಿವಾಸಿ ಲಕ್ಷ್ಮಮ್ಮ ಹಾಗೂ ಒಂಬತ್ತು ವರ್ಷದ ಬಾಲಕ ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡವರಾಗಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.

​ಘಟನೆಯ ಹಿನ್ನೆಲೆ:

​ಕಳೆದ 20 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿರುವ ಬಬ್ಲು ಎಂಬುವವರು ಪಾನಿಪುರಿ ವ್ಯಾಪಾರ ನಡೆಸುತ್ತಿದ್ದು, ವ್ಯಾಪಾರದ ಸಾಮಗ್ರಿ ಇಡಲು ಈ ಪ್ರದೇಶದಲ್ಲಿ ಪ್ರತ್ಯೇಕ ಗೋಡೌನ್ ಒಂದನ್ನು ಬಾಡಿಗೆಗೆ ಪಡೆದುಕೊಂಡಿದ್ದರು. ಶುಕ್ರವಾರ ರಾತ್ರಿ ವೇಳೆ ಗೋಡೌನ್‌ನಲ್ಲಿದ್ದ ಸಿಲಿಂಡರ್‌ನಿಂದ ಅನಿಲ (ಗ್ಯಾಸ್) ಸೋರಿಕೆಯಾಗಿದ್ದು, ಇಡೀ ಕೊಠಡಿಯೊಳಗೆ ವಿಪರೀತ ಅನಿಲ ಒತ್ತಡ ಉಂಟಾಗಿತ್ತು.

​ಇಂದು ಬೆಳಿಗ್ಗೆ ಬಬ್ಲು ಅವರು ಎಂದಿನಂತೆ ವ್ಯಾಪಾರದ ಕೆಲಸಕ್ಕಾಗಿ ಗೋಡೌನ್ ಬಾಗಿಲು ತೆರೆಯುತ್ತಿದ್ದಂತೆ ಏಕಾಏಕಿ ಬೆಂಕಿ ಹೊತ್ತಿಕೊಂಡು ಭೀಕರ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಪಕ್ಕದ ಮನೆಯ ಲಕ್ಷ್ಮಮ್ಮ ಹಾಗೂ ಬಾಲಕನ ಮೇಲೆಯೂ ಬೆಂಕಿಯ ಜ್ವಾಲೆ ತಗುಲಿ ಗಾಯಗಳಾಗಿವೆ.

​ಸ್ಥಳಕ್ಕೆ ಪೊಲೀಸ್ ಹಾಗೂ ಅಗ್ನಿಶಾಮಕ ದಳ ಭೇಟಿ:

​ಘಟನೆ ತಿಳಿಯುತ್ತಿದ್ದಂತೆ ರಾಜರಾಜೇಶ್ವರಿ ನಗರ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನಾ ಸ್ಥಳವನ್ನು ಪರಿಶೀಲಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಹಾಗೂ ತನಿಖೆಯನ್ನು ಕೈಗೊಂಡಿದ್ದಾರೆ.

 


Share News