ಹುಣಸೂರು: ತಾಲೂಕಿನ ಹನಗೋಡು ಭಾಗದಲ್ಲಿ ದಿನೇ ದಿನೇ ಹುಲಿ ಹಾವಳಿ ಹೆಚ್ಚಾಗಿದ್ದು, ಆತಂಕಗೊಂಡಿರುವ ಗ್ರಾಮಸ್ಥರ ರಕ್ಷಣೆಗೆ ಧಾವಿಸಿರುವ ಮಾಜಿ ಶಾಸಕ ಹೆಚ್.ಪಿ. ಮಂಜುನಾಥ್, ಕೂಡಲೇ ಕಾರ್ಯಾಚರಣೆ ತೀವ್ರಗೊಳಿಸಿ ಹುಲಿಯನ್ನು ಸೆರೆ ಹಿಡಿಯುವಂತೆ ಅರಣ್ಯಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಸ್ಥಳೀಯರ ಆಕ್ರೋಶ – ಅರಣ್ಯಾಧಿಕಾರಿಗಳಿಗೆ ಮುತ್ತಿಗೆ:
ಹನಗೋಡು ಸುತ್ತಮುತ್ತ ಹುಲಿ ಭೀತಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದ್ದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಗ್ರಾಮಸ್ಥರು, ಕಾರ್ಯಾಚರಣೆಯಲ್ಲಿ ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿ ಅರಣ್ಯಾಧಿಕಾರಿಗಳನ್ನು ಮುತ್ತಿಗೆ ಹಾಕಿ ತಕ್ಷಣವೇ ಹುಲಿಯನ್ನು ಬಂಧಿಸುವಂತೆ ತೀವ್ರ ಒತ್ತಾಯ ವ್ಯಕ್ತಪಡಿಸಿದರು.
ಗ್ರಾಮಸ್ಥರ ಮನವೊಲಿಸಿದ ಮಾಜಿ ಶಾಸಕ:
ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿರುವ ಮಾಹಿತಿ ತಿಳಿಯುತ್ತಿದ್ದಂತೆ ಮಾಜಿ ಶಾಸಕ ಹೆಚ್.ಪಿ. ಮಂಜುನಾಥ್ ಘಟನಾ ಸ್ಥಳಕ್ಕೆ ಧಾವಿಸಿದರು. ಸಾರ್ವಜನಿಕರೊಂದಿಗೆ ಮಾತುಕತೆ ನಡೆಸಿದ ಅವರು, “ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆ ಸುಲಭದ ಕೆಲಸವಲ್ಲ. ಇದಕ್ಕೆ ಸಾರ್ವಜನಿಕರ ಸಂಪೂರ್ಣ ಸಹಕಾರ ಅತ್ಯಗತ್ಯ” ಎಂದು ಗ್ರಾಮಸ್ಥರಿಗೆ ತಿಳಿಸಿ, ಅವರ ಕೋಪವನ್ನು ಶಮನಗೊಳಿಸಿ ಸಮಾಧಾನಪಡಿಸಿದರು.
ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿದ ಮಂಜುನಾಥ್, ಕಾರ್ಯಾಚರಣೆಯನ್ನು ತಕ್ಷಣವೇ ಚುರುಕುಗೊಳಿಸಿ ಹುಲಿಯನ್ನು ಬಂಧಿಸುವ ಮೂಲಕ ಗ್ರಾಮಸ್ಥರ ಆತಂಕ ದೂರ ಮಾಡಬೇಕು ಎಂದು ನಿರ್ದೇಶನ ನೀಡಿದರು.
Arakshakara Times Media
Related posts
