Share News

ಬೆಂಗಳೂರು: ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ 2022ರ ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಶಾರೀಕ್, ಕೊನೆಗೂ ಎನ್‌ಐಎ (NIA) ವಿಶೇಷ ನ್ಯಾಯಾಲಯದ ಮುಂದೆ ತನ್ನ ತಪ್ಪು ಒಪ್ಪಿಕೊಂಡಿದ್ದಾನೆ. ಈ ಸಂಬಂಧ ಆತ ಸಲ್ಲಿಸಿದ್ದ ತಪ್ಪೊಪ್ಪಿಗೆ ಅರ್ಜಿಯನ್ನು ನ್ಯಾಯಾಲಯವು ಅಧಿಕೃತವಾಗಿ ಅಂಗೀಕರಿಸಿದ್ದು, ಪ್ರಕರಣದ ತನಿಖೆಯಲ್ಲಿ ಇದು ಮಹತ್ವದ ತಿರುವು ನೀಡಿದೆ.

2022ರ ನವೆಂಬರ್ 19ರಂದು ಮಂಗಳೂರಿನ ಕಂಕನಾಡಿಯಲ್ಲಿ ಚಲಿಸುತ್ತಿದ್ದ ಆಟೋರಿಕ್ಷಾದಲ್ಲಿ ಐಇಡಿ (IED) ಅಳವಡಿಸಿದ್ದ ಪ್ರೆಶರ್ ಕುಕ್ಕರ್ ಸ್ಫೋಟಗೊಂಡಿತ್ತು. ಶಿವಮೊಗ್ಗ ಮೂಲದ 27 ವರ್ಷದ ಶಾರೀಕ್ ಈ ಬಾಂಬ್ ಸಾಗಿಸುತ್ತಿದ್ದಾಗ ಟೈಮರ್ ದೋಷದಿಂದಾಗಿ ಅದು ಆತನ ಮಡಿಲಲ್ಲೇ ಸ್ಫೋಟಗೊಂಡಿತ್ತು. ಘಟನೆಯಲ್ಲಿ ಶಾರೀಕ್ ಮತ್ತು ಆಟೋ ಚಾಲಕ ಪುರುಷೋತ್ತಮ್ ಪೂಜಾರಿ ಗಂಭೀರವಾಗಿ ಗಾಯಗೊಂಡಿದ್ದರು.

ಎನ್‌ಐಎ ತನಿಖೆಯ ಪ್ರಕಾರ, ಶಾರೀಕ್ ಐಸಿಸ್ (ISIS) ಪ್ರೇರಿತ ‘ಶಿವಮೊಗ್ಗ ಮಾಡ್ಯೂಲ್’ನ ಸಕ್ರಿಯ ಸದಸ್ಯನಾಗಿದ್ದ.

​ಗೋಡೆ ಬರಹ: 2020ರಲ್ಲಿ ಮಂಗಳೂರಿನಲ್ಲಿ ದೇಶವಿರೋಧಿ ಗೋಡೆ ಬರಹ ಬರೆದ ಪ್ರಕರಣದಲ್ಲಿ ಈತ ಭಾಗಿಯಾಗಿದ್ದ.

​ಐಇಡಿ ಪರೀಕ್ಷೆ: 2022ರ ಸೆಪ್ಟೆಂಬರ್‌ನಲ್ಲಿ ಶಿವಮೊಗ್ಗದ ತುಂಗಾ ತೀರದಲ್ಲಿ ನಡೆದ ಪ್ರಾಯೋಗಿಕ ಬಾಂಬ್ ಸ್ಫೋಟದ ಮಾಸ್ಟರ್ ಮೈಂಡ್ ಕೂಡ ಈತನೇ ಆಗಿದ್ದ.

​ಇತರ ಪ್ರಕರಣಗಳು: 2024ರ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದಲ್ಲೂ ಈತನ ಜಾಲದ ಕೈವಾಡವಿರುವ ಶಂಕೆಯನ್ನು ತನಿಖಾ ಸಂಸ್ಥೆಗಳು ವ್ಯಕ್ತಪಡಿಸಿವೆ.

ಆರಂಭದಲ್ಲಿ ತಾನು ನಿರಪರಾಧಿ ಎಂದು ವಾದಿಸಿದ್ದ ಶಾರೀಕ್, 2025ರ ಡಿಸೆಂಬರ್‌ನಲ್ಲಿ ದಿಢೀರ್ ಆಗಿ ತನ್ನ ನಿಲುವು ಬದಲಿಸಿ ತಪೊಪ್ಪಿಗೆ ಅರ್ಜಿ ಸಲ್ಲಿಸಿದ್ದ. “ನಾನೇ ಕುಕ್ಕರ್‌ನಲ್ಲಿ ಐಇಡಿ ಇಟ್ಟು ಸ್ಫೋಟಿಸಿದ್ದೇನೆ, ಈಗ ನನಗೆ ಪಶ್ಚಾತ್ತಾಪವಾಗಿದೆ, ಕಾನೂನು ಪ್ರಕಾರ ಶಿಕ್ಷೆ ನೀಡಿ” ಎಂದು ಆತ ಕೋರಿದ್ದ. ಸುಮಾರು ಮೂರು ತಿಂಗಳ ಪರಿಶೀಲನೆಯ ನಂತರ ಮಾರ್ಚ್ 26, 2026 ರಂದು ನ್ಯಾಯಾಲಯವು ಈ ಅರ್ಜಿಯನ್ನು ಮಾನ್ಯ ಮಾಡಿದೆ.

​ಆರೋಪಿ ಸ್ವತಃ ಅಪರಾಧ ಒಪ್ಪಿಕೊಂಡಿರುವುದರಿಂದ, ಈ ಜಟಲ ಪ್ರಕರಣದ ಅಂತಿಮ ತೀರ್ಪು ಶೀಘ್ರದಲ್ಲೇ ಹೊರಬೀಳುವ ಸಾಧ್ಯತೆಯಿದೆ.


Share News