Share News

ಚಿತ್ರದುರ್ಗ: ಸಹಪಾಠಿಗಳ ಅಪಪ್ರಚಾರ ಹಾಗೂ ಅನೈತಿಕ ಸಂಬಂಧದ ಸುಳ್ಳು ಆರೋಪದಿಂದ ಮನನೊಂದ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರು ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ಸಂಭವಿಸಿದೆ.

​ಹೊಳಲ್ಕೆರೆ ತಾಲೂಕಿನ ಮಲ್ಲಾಡಿಹಳ್ಳಿ ಆಯುರ್ವೇದ ಕಾಲೇಜಿನಲ್ಲಿ ಬಿ.ಎಂ.ಎಸ್ (BAMS) ಮುಗಿಸಿ ಪ್ರಸ್ತುತ ಇಂಟರ್ನ್‌ಶಿಪ್ ಮಾಡುತ್ತಿದ್ದ ನಿಖಿತಾ ಆತ್ಮಹತ್ಯೆಗೆ ಶರಣಾದ ದುರ್ದೈವಿ.

ಕಾಲೇಜಿನ ಉಪನ್ಯಾಸಕ ಡಾ. ರಾಜು ಅವರೊಂದಿಗೆ ನಿಖಿತಾ ಸಂಬಂಧ ಹೊಂದಿದ್ದಾರೆ ಎಂದು ಅವರ ಸಹಪಾಠಿಗಳು ಕಾಲೇಜಿನಲ್ಲಿ ಅಪಪ್ರಚಾರ ಮಾಡಿದ್ದರು ಎನ್ನಲಾಗಿದೆ. ಈ ಸುಳ್ಳು ಸುದ್ದಿಯನ್ನು ನಂಬಿದ ಡಾ. ರಾಜು ಅವರ ಪತ್ನಿ ನಿಶಾ ಅವರು ನಿಖಿತಾ ಅವರೊಂದಿಗೆ ಜಗಳವಾಡಿದ್ದರು ಎನ್ನಲಾಗಿದೆ. ಈ ಬೆಳವಣಿಗೆಯಿಂದ ತೀವ್ರ ಅವಮಾನಕ್ಕೊಳಗಾದ ನಿಖಿತಾ, ಮಾನಸಿಕವಾಗಿ ಜರ್ಜರಿತರಾಗಿದ್ದರು.

ಅವಮಾನ ತಾಳಲಾರದೆ ನಿಖಿತಾ ಅವರು ತಮ್ಮ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಆತ್ಮಹತ್ಯೆಗೂ ಮುನ್ನ ಅವರು ಸುದೀರ್ಘ ಡೆತ್‌ನೋಟ್ ಬರೆದಿಟ್ಟಿದ್ದು, ಅದರಲ್ಲಿ ತಮ್ಮ ಸಾವಿಗೆ ಕಾರಣರಾದ ಸಹಪಾಠಿಗಳ ಹೆಸರುಗಳನ್ನು ಉಲ್ಲೇಖಿಸಿದ್ದಾರೆ ಎಂದು ತಿಳಿದುಬಂದಿದೆ. “ತನ್ನ ಮೇಲೆ ಹೊರಿಸಲಾದ ಆರೋಪಗಳೆಲ್ಲವೂ ಸುಳ್ಳು” ಎಂದು ಅವರು ನೋವಿನಿಂದ ಬರೆದುಕೊಂಡಿದ್ದಾರೆ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಹೊಳಲ್ಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪೊಲೀಸರು ಡೆತ್‌ನೋಟ್ ಅನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಅಪಪ್ರಚಾರ ಮಾಡಿದ ಸಹಪಾಠಿಗಳು ಹಾಗೂ ಸಂಬಂಧಪಟ್ಟವರ ವಿಚಾರಣೆ ನಡೆಸಿ ತನಿಖೆ ಮುಂದುವರಿಸಿದ್ದಾರೆ.

​ವೈದ್ಯೆಯಾಗಿ ಸಮಾಜ ಸೇವೆ ಮಾಡಬೇಕಿದ್ದ ಪ್ರತಿಭಾವಂತ ಯುವತಿಯೊಬ್ಬಳು ಸುಳ್ಳು ಆರೋಪಕ್ಕೆ ಬಲಿಯಾಗಿರುವುದು ಜಿಲ್ಲೆಯಾದ್ಯಂತ ತೀವ್ರ ವಿಷಾದಕ್ಕೆ ಕಾರಣವಾಗಿದೆ.


Share News