ಭಾರತದ ಕ್ರಿಕೆಟ್ ಹಬ್ಬ ಶುರುವಾಗಿ ಅಬ್ಬರಿಸುತ್ತಿದೆ. ಹಾಗೆಯೇ RCB ಮ್ಯಾಚ್ ಟಿಕೆಟ್ ಭಾರಿ ಇದ್ದರೂ ಬೇಡಿಕೆ ಮಾತ್ರ ಕಡಿಮೆಯಾಗಿಲ್ಲ. ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ನಡುವಿನ ಹೈವೋಲ್ಟೇಜ್ ಪಂದ್ಯದ ಟಿಕೆಟ್‌ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ದೊಡ್ಡ ಜಾಲವನ್ನು ಸಿಸಿಬಿಯ ವಿಶೇಷ ವಿಚಾರಣಾ ದಳ ಭೇದಿಸಿದೆ. ಈ ಕಾರ್ಯಾಚರಣೆಯಲ್ಲಿ ಒಟ್ಟು 11 ಜನರನ್ನು ಬಂಧಿಸಲಾಗಿದ್ದು, ಅವರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಟಿಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ನಗರದ ಕಬ್ಬನ್‌ಪಾರ್ಕ್ ಮತ್ತು ಚಾಮರಾಜಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಅಕ್ರಮವಾಗಿ ಟಿಕೆಟ್ ಮಾರಾಟ ಮಾಡುತ್ತಿದ್ದ 11 ಮಂದಿಯನ್ನು ವಶಕ್ಕೆ ಪಡೆದು, ಅವರ ವಿರುದ್ಧ 7 ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ. ಬಂಧಿತರಿಂದ ಒಟ್ಟು 28 ಐಪಿಎಲ್ ಟಿಕೆಟ್‌ಗಳು ಹಾಗೂ 8 ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಲಾಗಿದೆ. ಅಷ್ಟೇ ಅಲ್ಲದೆ, ವಾಟ್ಸಪ್ ಮೂಲಕ ಆನ್‌ಲೈನ್ ಟಿಕೆಟ್‌ಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಯತ್ನಿಸಿದ್ದ ಸ್ಕ್ರೀನ್‌ಶಾಟ್ ಪ್ರತಿಗಳನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ವಶಪಡಿಸಿಕೊಂಡ ಒಟ್ಟು ಮಾಲಿನ ಮೌಲ್ಯ ಸುಮಾರು 4,53,000 ಎಂದು ಅಂದಾಜಿಸಲಾಗಿದೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಶ್ರೀ. ಸೀಮಾಂತ್ ಕುಮಾರ್ ಸಿಂಗ್ ಅವರ ಮಾರ್ಗದರ್ಶನದಲ್ಲಿ ಈ ಯಶಸ್ವಿ ಕಾರ್ಯಾಚರಣೆ ನಡೆದಿದೆ. ಅಪರಾಧ ವಿಭಾಗದ ಅಪರ ಪೊಲೀಸ್ ಆಯುಕ್ತರಾದ ಶ್ರೀ. ಅಜಯ್ ಹಿಲೋರಿ ಮತ್ತು ಅಪರಾಧ-1 ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ. ಶ್ರೀಹರಿಬಾಬು ಬಿಎಲ್ ಅವರು ಈ ತಂಡದ ನೇತೃತ್ವ ವಹಿಸಿದ್ದರು. ಸಿಸಿಬಿಯ ವಿಶೇಷ ವಿಚಾರಣಾ ದಳದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ. ಗೋಪಾಲ್ ಡಿ ಜೋಗಿನ್ ಅವರೊಂದಿಗೆ ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ಶ್ರೀ ದಯಾನಂದ ಎಂ ಜೆ, ಶ್ರೀ. ವರುಣ್ ಕುಮಾರ್ ಎಂ ಆರ್ , ಡಾ. ಬಿ ಎಸ್ ಸುಧಾಕರ್, ಶ್ರೀ. ವೀರೇಂದ್ರ ಪ್ರಸಾದ್ ಹಾಗೂ ಶ್ರೀ ಷಣ್ಮುಗಂ ಎಂ ಮತ್ತು ಇತರ ಸಿಬ್ಬಂದಿಯವರು ಈ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ದಂಧೆಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ವರದಿ :- ಮೋಹನ್ ಕುಮಾರ್ ಎಸ್ ನಾಯ್ಕ್