Share News

ಬೆಂಗಳೂರು: ಸಿಲಿಕಾನ್ ಸಿಟಿಯ ವಾಹನ ಸವಾರರಿಗೆ ಬಿಬಿಎಂಪಿ ಮತ್ತೊಂದು ಬಿಗ್ ಶಾಕ್ ನೀಡಿದೆ. ನಗರದ ಸಂಚಾರ ದಟ್ಟಣೆ ನಿಯಂತ್ರಣ ಹಾಗೂ ವ್ಯವಸ್ಥಿತ ಪಾರ್ಕಿಂಗ್ ಹೆಸರಿನಲ್ಲಿ ಜಯನಗರ ವಿಧಾನಸಭಾ ಕ್ಷೇತ್ರದ 42 ಪ್ರಮುಖ ರಸ್ತೆಗಳಲ್ಲಿ ಇನ್ಮುಂದೆ ‘ಪೇ ಅಂಡ್ ಪಾರ್ಕ್’ (Pay and Park) ವ್ಯವಸ್ಥೆಯನ್ನು ಜಾರಿಗೆ ತರಲು ಪಾಲಿಕೆ ನಿರ್ಧರಿಸಿದೆ.

ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾದ ಜಯನಗರದ ಸುಮಾರು 31.7 ಕಿ.ಮೀ ಉದ್ದದ ರಸ್ತೆಗಳನ್ನು ಈ ಯೋಜನೆಗಾಗಿ ಗುರುತಿಸಲಾಗಿದೆ.

​ವಾಹನ ಸಾಮರ್ಥ್ಯ: ಈ ರಸ್ತೆಗಳಲ್ಲಿ ಒಟ್ಟು 3,835 ದ್ವಿಚಕ್ರ ವಾಹನಗಳು ಹಾಗೂ 914 ಕಾರುಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.

​ಡಿಜಿಟಲ್ ವ್ಯವಸ್ಥೆ: ಇದು ಸಂಪೂರ್ಣ ಸ್ಮಾರ್ಟ್ ಪಾರ್ಕಿಂಗ್ ಆಗಿರಲಿದ್ದು, ಸವಾರರು ಆಯಪ್ ಮೂಲಕವೇ ಪಾರ್ಕಿಂಗ್ ಸ್ಲಾಟ್ ಲಭ್ಯತೆಯನ್ನು ಪರಿಶೀಲಿಸಬಹುದು.

​ಶುಲ್ಕದ ವಿವರ: ಮೂಲಗಳ ಪ್ರಕಾರ, ಪ್ರತಿ ಗಂಟೆಗೆ ದ್ವಿಚಕ್ರ ವಾಹನಗಳಿಗೆ ₹30 ಹಾಗೂ ಕಾರುಗಳಿಗೆ ₹50 ಶುಲ್ಕ ನಿಗದಿಪಡಿಸುವ ಸಾಧ್ಯತೆಯಿದೆ. ಕ್ಯೂಆರ್ ಕೋಡ್ ಮೂಲಕ ಆನ್‌ಲೈನ್ ಪಾವತಿ ಹಾಗೂ ಸಿಸಿ ಕ್ಯಾಮೆರಾ ಕಣ್ಗಾವಲು ವ್ಯವಸ್ಥೆ ಇರಲಿದೆ.

ಸಾಮಾನ್ಯವಾಗಿ ವಾಣಿಜ್ಯ ಪ್ರದೇಶಗಳಿಗೆ ಸೀಮಿತವಾಗಿದ್ದ ಈ ಯೋಜನೆ, ಈಗ ವಸತಿ ಪ್ರದೇಶದ ರಸ್ತೆಗಳಿಗೂ ವ್ಯಾಪಿಸಿರುವುದು ಸಾರ್ವಜನಿಕರ ನಿದ್ದೆಗೆಡಿಸಿದೆ. ಕೇವಲ ವ್ಯಾಪಾರ ಮಳಿಗೆಗಳ ಮುಂದಷ್ಟೇ ಅಲ್ಲದೆ, ಮನೆಗಳ ಮುಂದಿನ ರಸ್ತೆಗಳನ್ನೂ ಈ ಯೋಜನೆಗೆ ಒಳಪಡಿಸಿರುವುದು ಸ್ಥಳೀಯ ನಿವಾಸಿಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

​”ತೆರಿಗೆ ಹೆಸರಿನಲ್ಲಿ ಹಣ ವಸೂಲಿ ಮಾಡುವ ಪಾಲಿಕೆ, ಈಗ ಮನೆ ಮುಂದೆ ಗಾಡಿ ನಿಲ್ಲಿಸಲು ಹಣ ಕೇಳುತ್ತಿರುವುದು ಎಷ್ಟು ಸರಿ?” ಎಂದು ಸ್ಥಳೀಯ ನಿವಾಸಿಗಳು ಪ್ರಶ್ನಿಸುತ್ತಿದ್ದಾರೆ.

ಜಯನಗರದಲ್ಲಿ ಈ ಯೋಜನೆ ಯಶಸ್ವಿಯಾದರೆ, ಮುಂದಿನ ಹಂತವಾಗಿ ಬಿಟಿಎಂ ಲೇಔಟ್, ಬೊಮ್ಮನಹಳ್ಳಿ ಮತ್ತು ಪದ್ಮನಾಭನಗರ ಸೇರಿದಂತೆ ನಗರದ ಇತರ ಪ್ರಮುಖ ವಾಣಿಜ್ಯ ಕೇಂದ್ರಗಳಿಗೂ ಪಾರ್ಕಿಂಗ್ ಶುಲ್ಕ ವಿಸ್ತರಿಸಲು ಅಧಿಕಾರಿಗಳು ತಯಾರಿ ನಡೆಸಿದ್ದಾರೆ.

ಸಂಚಾರ ದಟ್ಟಣೆ ಕಡಿಮೆ ಮಾಡುವುದು ಪಾಲಿಕೆಯ ಉದ್ದೇಶ ಎನ್ನಲಾಗುತ್ತಿದ್ದರೂ, ವಾಸ್ತವದಲ್ಲಿ ಇದು ಆದಾಯ ಗಳಿಸುವ ತಂತ್ರ ಎಂದು ಜನರು ಆರೋಪಿಸುತ್ತಿದ್ದಾರೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತು ತೆರಿಗೆ ಹೊರೆಯಿಂದ ಕಂಗೆಟ್ಟಿರುವ ಜನರಿಗೆ, ಪಾರ್ಕಿಂಗ್ ಶುಲ್ಕವು ಗಾಯದ ಮೇಲೆ ಬರೆ ಎಳೆದಂತಾಗಿದೆ. ದಂಡ ಮತ್ತು ಟೋಯಿಂಗ್ ಭೀತಿಯ ನಡುವೆ ಈಗ ಅಧಿಕೃತವಾಗಿ ಹಣ ಪಾವತಿಸಬೇಕಾದ ಅನಿವಾರ್ಯತೆ ಸವಾರರಿಗೆ ಎದುರಾಗಿದೆ.


Share News