ಬೆಂಗಳೂರು: ಮಾಡುವುದು ಕಾಪರ್ ಕಳ್ಳತನ, ಆದರೆ ಓಡಾಟ ಮಾತ್ರ ವಿಮಾನದಲ್ಲಿ! ಬಿಎಸ್ಸೆನ್ನೆಲ್ (BSNL) ಸಿಬ್ಬಂದಿಯಂತೆ ವೇಷ ಧರಿಸಿ ಹಗಲು ಹೊತ್ತಿನಲ್ಲೇ ತಾಂತ್ರಿಕ ಉಪಕರಣ ಹಾಗೂ ಕಾಪರ್ ವೈರ್‌ಗಳನ್ನು ಕದಿಯುತ್ತಿದ್ದ ಉತ್ತರ ಪ್ರದೇಶ ಮೂಲದ ಮೂವರು ಅಂತರರಾಜ್ಯ ಖದೀಮರನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ರವಿ ಚವ್ಹಾಣ್, ಸಂದೀಪ್ ಮತ್ತು ಸೈಯದ್ ಜಾಹೇದ್ ಎಂದು ಗುರುತಿಸಲಾಗಿದ್ದು, ಇವರಿಂದ ಸುಮಾರು 7 ಲಕ್ಷ ರೂಪಾಯಿ ಮೌಲ್ಯದ ಮಾಡ್ಯೂಲ್‌ಗಳು, ಕಾಪರ್ ಕೇಬಲ್ ಮತ್ತು ಕೃತ್ಯಕ್ಕೆ ಬಳಸಿದ್ದ ಕಾರು ಹಾಗೂ ಸಲಕರಣೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಆರೋಪಿಗಳ ಕೃತ್ಯದ ಶೈಲಿ ಪೊಲೀಸರನ್ನೇ ಬೆರಗುಗೊಳಿಸುವಂತಿದೆ. ಇವರು ಕಳ್ಳತನ ಮಾಡಲು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ವಿಮಾನದ ಮೂಲಕ ಪ್ರಯಾಣಿಸುತ್ತಿದ್ದರು. ಕಳ್ಳತನ ಮಾಡುವ ಮುನ್ನ ಬಿಎಸ್ಸೆನ್ನೆಲ್ ಸಿಬ್ಬಂದಿಯಂತೆ ಕಾಣಲು ನೀಲಿ ಬಣ್ಣದ ಯೂನಿಫಾರ್ಮ್‌ಗಳನ್ನು ಹೊಲಿಸಿಕೊಂಡಿದ್ದರು. ರಸ್ತೆ ಬದಿಯ ಫುಟ್‌ಪಾತ್‌ಗಳಲ್ಲಿರುವ ಬಿಎಸ್ಸೆನ್ನೆಲ್ ಟೆಲಿಫೋನ್ ಮತ್ತು ಇಂಟರ್ನೆಟ್ ಪಿಲ್ಲರ್‌ಗಳನ್ನು ರಿಪೇರಿ ಮಾಡುವ ನೆಪದಲ್ಲಿ ಸುತ್ತಿಗೆ, ಪಿಕಾಸಿ ಮತ್ತು ಕಟರ್‌ಗಳನ್ನು ಬಳಸಿ ಒಡೆದು ಒಳಗಿದ್ದ ಬೆಲೆಬಾಳುವ ಕಾಪರ್ ವೈರ್‌ಗಳನ್ನು ಲೂಟಿ ಮಾಡುತ್ತಿದ್ದರು.
ಕಳೆದ ಏಪ್ರಿಲ್ 17 ಮತ್ತು 19 ರಂದು ಬೆಂಗಳೂರಿನ ಸದಾಶಿವನಗರ, ಮತ್ತಿಕೆರೆ, ಮಲ್ಲೇಶ್ವರಂ ಮತ್ತು ಯಶವಂತಪುರ ಭಾಗಗಳಲ್ಲಿ ಈ ಗ್ಯಾಂಗ್ ಕೈಚಳಕ ತೋರಿಸಿತ್ತು. ಈ ಬಗ್ಗೆ ಬಿಎಸ್ಸೆನ್ನೆಲ್ ಅಧಿಕಾರಿಗಳು ನೀಡಿದ ದೂರಿನ ಆಧಾರದ ಮೇಲೆ ಕಾರ್ಯಾಚರಣೆ ಕೈಗೊಂಡ ಯಶವಂತಪುರ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ಈ ವೇಳೆ ಹ್ಯುಂಡೈ ಕಾರಿನಲ್ಲಿ ಬಂದಿದ್ದ ‘ನಕಲಿ’ ಸಿಬ್ಬಂದಿಗಳ ಚಲನವಲನ ಕಂಡುಬಂದಿತ್ತು. ಆರೋಪಿಗಳು ಕದ್ದ ಮಾಲನ್ನು ರೈಲಿನ ಮೂಲಕ ಸಾಗಿಸಲು ಯತ್ನಿಸುತ್ತಿದ್ದಾಗ ಪೊಲೀಸರು ದಾಳಿ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿಚಾರಣೆಯ ವೇಳೆ ಆರೋಪಿಗಳು, ಮಾರುಕಟ್ಟೆಯಲ್ಲಿ ಕಾಪರ್ ವೈರ್‌ಗೆ ಹೆಚ್ಚಿನ ಬೇಡಿಕೆ ಮತ್ತು ಬೆಲೆ ಇರುವುದರಿಂದ ಈ ಹಾದಿ ತುಳಿದಿರುವುದಾಗಿ ಒಪ್ಪಿಕೊಂಡಿದ್ದಾರೆ. ವಿಮಾನದಲ್ಲಿ ಬಂದು ಕಳ್ಳತನ ಮಾಡಿ, ಮಾಲನ್ನು ರೈಲಿನ ಮೂಲಕ ಸಾಗಿಸಿ ತಾವು ಮಾತ್ರ ಪರಾರಿಯಾಗುತ್ತಿದ್ದರು. ಕೇವಲ ಕರ್ನಾಟಕ ಮಾತ್ರವಲ್ಲದೆ ಹಲವು ರಾಜ್ಯಗಳಲ್ಲಿ ಇವರು ಇಂತಹ ಕೃತ್ಯ ಎಸಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಸದ್ಯ ಆರೋಪಿಗಳು ಜೈಲು ಪಾಲಾಗಿದ್ದು, ಯಶವಂತಪುರ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.