ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯ ಕತ್ರಿಗುಪ್ಪೆಯಲ್ಲಿರುವ ಮನೆಯೊಂದರಲ್ಲಿ ಕೆಲಸಕ್ಕಿದ್ದ ದಂಪತಿಗಳು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ಕಳವು ಮಾಡಿದ್ದ ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಬಂಧಿತರಿಂದ ಒಟ್ಟು 199 ಗ್ರಾಂ ಚಿನ್ನಾಭರಣ, 730 ಗ್ರಾಂ ಬೆಳ್ಳಿಯ ವಸ್ತುಗಳು ಮತ್ತು 13.20 ಲಕ್ಷ ನಗದು ಸೇರಿದಂತೆ ಒಟ್ಟು 42.89 ಲಕ್ಷ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ.
ದೂರುದಾರರ ಮನೆಯಲ್ಲಿ ಕಳೆದ ಐದು ತಿಂಗಳಿನಿಂದ ಕೆಲಸಕ್ಕಿದ್ದ ಮಹಿಳೆ ಮತ್ತು ಆಕೆಯ ಪತಿ (ಕಾರು ಚಾಲಕ), ಮಾಲೀಕರು ನೀಡಿದ್ದ ಔಟ್‌ಹೌಸ್‌ನಲ್ಲೇ ವಾಸವಿದ್ದರು. ಮಾರ್ಚ್ 1 ರಿಂದ ಮಾರ್ಚ್ 15ರ ಅವಧಿಯಲ್ಲಿ ಬೀರುವಿನಲ್ಲಿದ್ದ ಚಿನ್ನ ಹಾಗೂ ನಗದನ್ನು ಕಳವು ಮಾಡಲಾಗಿತ್ತು. ಈ ಬಗ್ಗೆ ಏಪ್ರಿಲ್ 17ರಂದು ದಾಖಲಾದ ದೂರಿನನ್ವಯ ತನಿಖೆ ಕೈಗೊಂಡ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ. ಸಿ ಗಿರೀಶ್ ನಾಯ್ ನೇತೃತ್ವದ ತಂಡವು ದಂಪತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯ ಒಪ್ಪಿಕೊಂಡಿದ್ದಾರೆ.
ಆರೋಪಿಗಳು ಕದ್ದ ಮಾಲನ್ನು ತಮ್ಮ ವಾಸದ ಮನೆ, ಜ್ಯೂವೆಲರಿ ಶಾಪ್ ಹಾಗೂ ತಮ್ಮ ಸಂಬಂಧಿಕರು ಮತ್ತು ಸ್ನೇಹಿತರ ಬಳಿ ಬಚ್ಚಿಟ್ಟಿದ್ದರು. ಪೊಲೀಸರು ಕಾರ್ಯಾಚರಣೆ ನಡೆಸಿ ಎಲ್ಲವನ್ನೂ ರಿಕವರಿ ಮಾಡಿದ್ದು, ಸದ್ಯ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. ದಕ್ಷಿಣ ವಿಭಾಗದ ಡಿಸಿಪಿ ಡಾ. ಕೆ ವಂಶಿಕೃಷ್ಣ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ.
ವರದಿ :- ಮೋಹನ್ ಕುಮಾರ್ ಎಸ್ ನಾಯ್ಕ್