
ಹೈದರಾಬಾದ್:ಸಿನಿಮಾ ಶೈಲಿಯಲ್ಲೇ ವೇಷ ಮರೆಸಿಕೊಂಡು ಕಾರ್ಯಪ್ರವೃತ್ತರಾದ ಮಲ್ಕಾಜ್ಗಿರಿ ಪೊಲೀಸ್ ಆಯುಕ್ತೆ ಸುಮತಿ ಐಪಿಎಸ್ ಅವರು, ರಾತ್ರಿ ವೇಳೆ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದ 40ಕ್ಕೂ ಹೆಚ್ಚು ರೋಡ್ ರೋಮಿಯೋಗಳನ್ನು ರೆಡ್ಹ್ಯಾಂಡ್ ಆಗಿ ಹಿಡಿದು ಜೈಲಿಗಟ್ಟಿದ್ದಾರೆ. ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಅಖಾಡಕ್ಕಿಳಿದ ಕಮಿಷನರ್ ನಡೆಗೆ ಸಾರ್ವಜನಿಕ ವಲಯದಲ್ಲಿ ಭಾರಿ ಶ್ಲಾಘನೆ ವ್ಯಕ್ತವಾಗಿದೆ.
ನಗರದಲ್ಲಿ ರಾತ್ರಿ ವೇಳೆ ಮಹಿಳೆಯರ ಸುರಕ್ಷತೆ ಹೇಗಿದೆ ಎಂಬುದನ್ನು ಖುದ್ದಾಗಿ ಪರೀಕ್ಷಿಸಲು ನಿರ್ಧರಿಸಿದ ಸುಮತಿ ಅವರು, ಯಾವುದೇ ಭದ್ರತೆಯಿಲ್ಲದೆ ಸಾಮಾನ್ಯ ಮಹಿಳೆಯಂತೆ ಸಾಧಾರಣ ಉಡುಪಿನಲ್ಲಿ ರಾತ್ರಿ 12 ಗಂಟೆಗೆ ದಿಲ್ಸುಖ್ನಗರದ ಬಸ್ ನಿಲ್ದಾಣದಲ್ಲಿ ಒಬ್ಬಂಟಿಯಾಗಿ ನಿಂತಿದ್ದರು.
ಕಿಡಿಗೇಡಿಗಳ ಅಟ್ಟಹಾಸ: ರಾತ್ರಿ 12ರಿಂದ ಬೆಳಗಿನ ಜಾವ 3 ಗಂಟೆಯವರೆಗೆ ಆಯುಕ್ತರು ಅಲ್ಲಿಯೇ ಇದ್ದರು. ಈ ವೇಳೆ ಅಲ್ಲಿಗೆ ಬಂದ ಸುಮಾರು 40ಕ್ಕೂ ಹೆಚ್ಚು ಕಿಡಿಗೇಡಿಗಳು, ಮದ್ಯ ಹಾಗೂ ಗಾಂಜಾ ಅಮಲಿನಲ್ಲಿ ಅಸಭ್ಯವಾಗಿ ವರ್ತಿಸಿದ್ದಾರೆ. ಬೈಕ್ಗಳನ್ನು ಅಡ್ಡಗಟ್ಟುವುದು, ಅಶ್ಲೀಲ ಕಮೆಂಟ್ ಮಾಡುವುದು ಹಾಗೂ ದೈಹಿಕವಾಗಿ ಕಿರುಕುಳ ನೀಡಲು ಯತ್ನಿಸುವ ಮೂಲಕ ತಮ್ಮ ವಿಕೃತಿ ಮೆರೆದಿದ್ದಾರೆ.
ಶಾಕ್ ಕೊಟ್ಟ ಸಲ್ಯೂಟ್: ಬೆಳಗಿನ ಜಾವ 3:30ರ ಸುಮಾರಿಗೆ ಪೊಲೀಸ್ ಗಸ್ತು ವಾಹನ ಸ್ಥಳಕ್ಕೆ ಆಗಮಿಸಿತು. ವಾಹನದಿಂದ ಇಳಿದ ಸಬ್ ಇನ್ಸ್ಪೆಕ್ಟರ್ ಅವರು ಅಲ್ಲಿ ನಿಂತಿದ್ದ ಮಹಿಳೆಗೆ ಗೌರವಪೂರ್ವಕವಾಗಿ ಸಲ್ಯೂಟ್ ಹೊಡೆದಾಗ, ಅಲ್ಲಿದ್ದ ಗೂಂಡಾಗಳಿಗೆ ಒಂದು ಕ್ಷಣ ಸಿಡಿಲು ಬಡಿದಂತಾಯಿತು. ತಾವು ಇಷ್ಟೊತ್ತು ಕಿರುಕುಳ ನೀಡಿದ್ದು ಸ್ವತಃ ನಗರದ ಪೊಲೀಸ್ ಕಮಿಷನರ್ಗೆ ಎಂಬ ಸತ್ಯ ತಿಳಿಯುತ್ತಿದ್ದಂತೆ ಎಲ್ಲರೂ ಪರಾರಿಯಾಗಲು ಯತ್ನಿಸಿದರು. ಆದರೆ ಅಷ್ಟರಲ್ಲೇ ಪೊಲೀಸರು ಎಲ್ಲರನ್ನೂ ಸುತ್ತುವರೆದು ವಶಕ್ಕೆ ಪಡೆದರು.
ಬಂಧಿತರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳು ಮತ್ತು ಉದ್ಯೋಗಾಕಾಂಕ್ಷಿಗಳಾಗಿದ್ದು, ಅವರಿಗೆ ಪೊಲೀಸ್ ಶೈಲಿಯಲ್ಲಿ ಪಾಠ ಕಲಿಸಿದ ಸುಮತಿ ಅವರು ಕಠಿಣ ಎಚ್ಚರಿಕೆ ನೀಡಿದರು. “ರಸ್ತೆಯಲ್ಲಿ ಒಬ್ಬಂಟಿ ಮಹಿಳೆ ಕಂಡಾಗ ಸಹಾಯ ಮಾಡುವ ಗುಣ ಬೆಳೆಸಿಕೊಳ್ಳಿ. ಗಾಂಜಾ-ಮದ್ಯದ ವ್ಯಸನಕ್ಕೆ ಬಿದ್ದು ಜೀವನ ಹಾಳುಮಾಡಿಕೊಂಡರೆ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ” ಎಂದು ಬುದ್ಧಿವಾದ ಹೇಳಿದರು.
ಐಪಿಎಸ್ ಅಧಿಕಾರಿ ಸುಮತಿ ಅವರಿಗೆ ಇಂತಹ ಕಾರ್ಯಾಚರಣೆಗಳು ಹೊಸತಲ್ಲ. 2001ರಲ್ಲಿ ಅವರು ಡಿಎಸ್ಪಿಯಾಗಿದ್ದಾಗ ಕಾಜಿಪೇಟೆ ರೈಲು ನಿಲ್ದಾಣದಲ್ಲೂ ಇದೇ ರೀತಿ ವೇಷ ಮರೆಸಿಕೊಂಡು ಕಾರ್ಯಾಚರಣೆ ನಡೆಸಿ ಸುದ್ದಿಯಾಗಿದ್ದರು. ಈಗ ಕಮಿಷನರ್ ಆಗಿ ತಮ್ಮ ಮೊದಲ ದಿನವೇ ಅಖಾಡಕ್ಕಿಳಿಯುವ ಮೂಲಕ ಮಹಿಳೆಯರ ರಕ್ಷಣೆಗೆ ತಾವು ಬದ್ಧ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಈ ಘಟನೆಯು ನಗರದ ಪೊಲೀಸ್ ಗಸ್ತು ವ್ಯವಸ್ಥೆಯ ವೈಫಲ್ಯವನ್ನೂ ಎತ್ತಿ ತೋರಿಸಿದ್ದು, ಇನ್ನು ಮುಂದೆ ರಾತ್ರಿ ವೇಳೆ ಕಣ್ಗಾವಲು ಇನ್ನಷ್ಟು ಬಿಗಿಯಾಗಲಿದೆ ಎಂದು ಆಯುಕ್ತರು ತಿಳಿಸಿದ್ದಾರೆ.