Share News

ಬೆಂಗಳೂರು: ಇಂಧನ ಇಲಾಖೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿಲ್ ಕಲೆಕ್ಟರ್, ಮೀಟರ್ ರೀಡರ್ ಹಾಗೂ ಲೈನ್ ಮ್ಯಾನ್‌ಗಳು ಕರ್ತವ್ಯದ ಅವಧಿಯಲ್ಲಿ ಕಡ್ಡಾಯವಾಗಿ ಸಮವಸ್ತ್ರ ಮತ್ತು ಇಲಾಖೆಯ ಗುರುತಿನ ಚೀಟಿಯನ್ನು ಧರಿಸುವಂತೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.

ಇತ್ತೀಚೆಗೆ ಹುಬ್ಬಳ್ಳಿಯ ಆನಂದನಗರದಲ್ಲಿ ಅನಾಮಧೇಯ ವ್ಯಕ್ತಿಯೊಬ್ಬ ಇಲಾಖೆಯ ಸಮವಸ್ತ್ರ ಧರಿಸಿ, ತಾನು ಬಿಲ್ ಕಲೆಕ್ಟರ್ ಎಂದು ಹೇಳಿಕೊಂಡು ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ನಕಲಿ ಸಿಬ್ಬಂದಿಗಳ ಈ ಹಾವಳಿಯಿಂದಾಗಿ ಸಾರ್ವಜನಿಕರು ಅಧಿಕೃತ ಸಿಬ್ಬಂದಿಗಳನ್ನು ಕಂಡರೂ ಅನುಮಾನಿಸುವಂತಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರಾದ ಮೋಹನ್ ಕುಮಾರ್ ದಾನಪ್ಪನವರು ಇಂಧನ ಸಚಿವರಿಗೆ ಪತ್ರ ಬರೆದು, ಕಟ್ಟುನಿಟ್ಟಿನ ನಿಯಮ ಜಾರಿಗೆ ತರುವಂತೆ ಮನವಿ ಮಾಡಿದ್ದರು.

ಸರ್ಕಾರದ ಆದೇಶದನ್ವಯ ಬೆಸ್ಕಾಂ, ಮೆಸ್ಕಾಂ, ಸೆಸ್ಕ್, ಹೆಸ್ಕಾಂ ಮತ್ತು ಜೆಸ್ಕಾಂ ಸೇರಿದಂತೆ ರಾಜ್ಯದ ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳ (ESCOMs) ಸಿಬ್ಬಂದಿಗಳು ಈ ಕೆಳಗಿನ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ:

​ಸಮವಸ್ತ್ರ ಮತ್ತು ಐಡಿ ಕಾರ್ಡ್: ಕರ್ತವ್ಯದ ಸಮಯದಲ್ಲಿ ಹಾಗೂ ಗ್ರಾಹಕರ ಮನೆಗಳಿಗೆ ತೆರಳುವಾಗ ಇಲಾಖೆ ನಿಗದಿಪಡಿಸಿದ ಸಮವಸ್ತ್ರ ಮತ್ತು ಅಧಿಕೃತ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಧರಿಸಿರಬೇಕು.

​ಶಿಸ್ತುಬದ್ಧ ನಡವಳಿಕೆ: ಸಿಬ್ಬಂದಿಗಳು ಸಾರ್ವಜನಿಕರ ಬಳಿ ತೆರಳುವಾಗ ಶುಭ್ರವಾದ ತಲೆಕೂದಲು ಮತ್ತು ಚೊಕ್ಕವಾದ ಗಡ್ಡದೊಂದಿಗೆ ಶಿಸ್ತುಬದ್ಧವಾಗಿ ಕಾಣಿಸಿಕೊಳ್ಳಬೇಕು.

​ಜಾಗೃತಿ ಕಾರ್ಯಕ್ರಮ: ನಕಲಿ ಸಿಬ್ಬಂದಿಗಳ ಬಗ್ಗೆ ಸಾರ್ವಜನಿಕರಲ್ಲಿ ಇರುವ ಆತಂಕ ದೂರ ಮಾಡಲು ಸಾಮಾಜಿಕ ಜಾಲತಾಣ, ರೇಡಿಯೋ, ಎಫ್.ಎಂ., ಪತ್ರಿಕೆ ಮತ್ತು ಟಿವಿ ಮಾಧ್ಯಮಗಳ ಮೂಲಕ ವ್ಯಾಪಕ ಜಾಗೃತಿ ಮೂಡಿಸಲು ಇಲಾಖೆ ನಿರ್ಧರಿಸಿದೆ.

​ಈ ಕ್ರಮವು ನಕಲಿ ವ್ಯಕ್ತಿಗಳ ವಂಚನೆಯನ್ನು ತಡೆಯುವುದಲ್ಲದೆ, ಇಂಧನ ಇಲಾಖೆಯ ಸಿಬ್ಬಂದಿಗಳು ಮತ್ತು ಸಾರ್ವಜನಿಕರ ನಡುವೆ ವಿಶ್ವಾಸಾರ್ಹತೆಯನ್ನು ಹೆಚ್ಚಿಸಲು ಸಹಕಾರಿಯಾಗಲಿದೆ ಎಂದು ಸರ್ಕಾರ ಆಶಿಸಿದೆ.

 


Share News