Share News

ಶೃಂಗೇರಿ: ಜಿಲ್ಲೆಯ ವಿವಿಧ ದೇವಸ್ಥಾನಗಳಲ್ಲಿ ಸರಣಿ ಕಳ್ಳತನ ನಡೆಸಿ ಭಕ್ತರಲ್ಲಿ ಆತಂಕ ಮೂಡಿಸಿದ್ದ ಇಬ್ಬರು ಅಂತರ್ ಜಿಲ್ಲಾ ಕಿರಾತಕ ಮನೆಗಳ್ಳರನ್ನು ಬಂಧಿಸುವಲ್ಲಿ ಶೃಂಗೇರಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಸುಮಾರು 11 ಲಕ್ಷ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತ ಆರೋಪಿಗಳು ಶೃಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಮೆಣಸೆ ಗ್ರಾಮದ ಕನ್ಯಾಕುಮಾರಿ ದೇವಸ್ಥಾನ ಹಾಗೂ ಯಡದಳ್ಳಿಯ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನಗಳಲ್ಲಿ ಒಡವೆ ಮತ್ತು ಕಾಣಿಕೆ ಹಣವನ್ನು ದೋಚಿದ್ದರು. ಪೊಲೀಸರ ತೀವ್ರ ವಿಚಾರಣೆ ವೇಳೆ ಆರೋಪಿಗಳು ಇತರೆ ಜಿಲ್ಲೆಗಳಲ್ಲೂ ಕೈಚಳಕ ತೋರಿರುವುದನ್ನು ಒಪ್ಪಿಕೊಂಡಿದ್ದಾರೆ.

​ಚಿಕ್ಕಮಗಳೂರು ಜಿಲ್ಲೆಯ ಬಣಕಲ್ ವ್ಯಾಪ್ತಿಯ ಸಬ್ಲಿ ಗ್ರಾಮದ ದುರ್ಗಾಪರಮೇಶ್ವರಿ ದೇವಸ್ಥಾನ.

​ಹಾಸನ ಜಿಲ್ಲೆಯ ಬೇಲೂರು ವ್ಯಾಪ್ತಿಯ ಶೆಟ್ಟಿಗೆರೆ ದೇವಿರಮ್ಮ ದೇವಸ್ಥಾನ.

ಈ ಮೂಲಕ ಒಟ್ಟು ನಾಲ್ಕು ಪ್ರಮುಖ ದೇವಸ್ಥಾನಗಳ ಕಳ್ಳತನ ಪ್ರಕರಣಗಳನ್ನು ಪತ್ತೆಹಚ್ಚಿದಂತಾಗಿದೆ.

ಶೃಂಗೇರಿ ಪೊಲೀಸ್ ಠಾಣೆಯ ಪ್ರಭಾರ ಪೊಲೀಸ್ ನಿರೀಕ್ಷಕರಾದ ಅಬ್ದುಲ್ ಖಾದರ್ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡದಲ್ಲಿ ಪಿಎಸ್ಐಗಳಾದ ಅಭಿಷೇಕ್ ಕೆ, ನಾಗರಾಜ್ ಬಿ ಆರ್ ಹಾಗೂ ಸಿಬ್ಬಂದಿಗಳಾದ ರಜತ್, ಕುಮಾರ್, ಸುನಿಲ್ ಕುಮಾರ್, ಪರಮೇಶ್, ಅಜಯ್, ಪ್ರದೀಪ, ಸದಾಶಿವ ಕಾರಜೋಳ, ಮದನ್, ರಾಮು ಹನಗಂಡಿ, ಸುನೀಲ್, ಗೋಪಾಲ್ ರೆಡ್ಡಿ ಮತ್ತು ಪ್ರಶಾಂತ್ ಅವರು ಪಾಲ್ಗೊಂಡು ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.

ಈ ಪ್ರಕರಣದ ಭೇದಿಸುವಲ್ಲಿ ತಾಂತ್ರಿಕ ಹಾಗೂ ವೈಜ್ಞಾನಿಕ ಸಾಕ್ಷ್ಯಗಳು ಪ್ರಮುಖ ಪಾತ್ರ ವಹಿಸಿವೆ. ಚಿಕ್ಕಮಗಳೂರು ಜಿಲ್ಲಾ ಬೆರಳು ಮುದ್ರೆ ಘಟಕದ ಪೊಲೀಸ್ ನಿರೀಕ್ಷಕ ಮಂಜುನಾಥ್ ಹಾಗೂ ಸಿಬ್ಬಂದಿಗಳಾದ ಸತೀಶ್ ಮತ್ತು ಕುಮಾರ್ ಅವರು ತನಿಖೆಗೆ ಅಗತ್ಯವಾದ ವೈಜ್ಞಾನಿಕ ನೆರವು ನೀಡಿದ್ದಾರೆ.

​ದೇವಸ್ಥಾನಗಳಲ್ಲೇ ಕಳ್ಳತನ ಮಾಡುತ್ತಿದ್ದ ಗ್ಯಾಂಗ್ ಸೆರೆಸಿಕ್ಕಿರುವುದು ಸಾರ್ವಜನಿಕರಲ್ಲಿ ಸಮಾಧಾನ ತಂದಿದೆ. ಪೊಲೀಸರ ಈ ದಕ್ಷ ಕಾರ್ಯಾಚರಣೆಗೆ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 


Share News