Share News

ಚಿಕ್ಕಮಗಳೂರು: ಕೋಟ್ಯಾಂತರ ರೂಪಾಯಿ ಬೆಲೆಬಾಳುತ್ತದೆ ಎಂದು ನಂಬಿಸಿ ಅಕ್ರಮವಾಗಿ ಎರಡು ತಲೆ ಹಾವನ್ನು (ರೆಡ್ ಸ್ಯಾಂಡ್ ಬೋವಾ) ಮಾರಾಟ ಮಾಡಲು ಯತ್ನಿಸುತ್ತಿದ್ದ ಐವರು ಅಂತರರಾಜ್ಯ ಆರೋಪಿಗಳನ್ನು ಸಿಐಡಿ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ನಗರದ ವಾಜಪೇಯಿ ಬಡಾವಣೆ ಸಮೀಪ ಎರಡು ತಲೆ ಹಾವಿನ ಅಕ್ರಮ ಮಾರಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಸಿಐಡಿ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಸಾರ್ವಜನಿಕರಿಗೆ ಕೋಟ್ಯಾಂತರ ರೂಪಾಯಿ ಆಮಿಷವೊಡ್ಡಿ ಹಾವನ್ನು ಮಾರಾಟ ಮಾಡಲು ಸಂಚು ರೂಪಿಸುತ್ತಿದ್ದ ಐವರನ್ನು ರೆಡ್‌ಹ್ಯಾಂಡಾಗಿ ಹಿಡಿಯಲಾಗಿದೆ.

​ಬಂಧಿತರಿಂದ ಸುಮಾರು 1 ಕೆಜಿ 400 ಗ್ರಾಂ ತೂಕದ ಬೃಹತ್ ಗಾತ್ರದ ‘ಮಣ್ಣುಮುಕ್ಕ’ (ಎರಡು ತಲೆ ಹಾವು) ಹಾವನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತ ಆರೋಪಿಗಳಲ್ಲಿ ಇಬ್ಬರು ಆಂಧ್ರಪ್ರದೇಶ ಮೂಲದವರಾಗಿದ್ದು, ಉಳಿದ ಇಬ್ಬರು ತುಮಕೂರು ಹಾಗೂ ಒಬ್ಬ ಶಿವಮೊಗ್ಗ ಮೂಲದವನು ಎಂದು ಗುರುತಿಸಲಾಗಿದೆ. ಈ ತಂಡವು ವ್ಯವಸ್ಥಿತವಾಗಿ ಜಾಲವನ್ನು ಹೆಣೆದು ವನ್ಯಜೀವಿಗಳ ಅಕ್ರಮ ವ್ಯಾಪಾರದಲ್ಲಿ ತೊಡಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಕಾರ್ಯಾಚರಣೆ ವೇಳೆ ಆರೋಪಿಗಳು ಬಳಸುತ್ತಿದ್ದ ಆಂಧ್ರ ನೋಂದಣಿಯ ಸ್ವಿಫ್ಟ್ ಕಾರು ಹಾಗೂ ಕರ್ನಾಟಕ ನೋಂದಣಿಯ ವ್ಯಾಗನರ್ ಕಾರನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

​ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಚಿಕ್ಕಮಗಳೂರು ನಗರದ ವಾಜಪೇಯಿ ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.


Share News