ರಾಯ್ಪುರ: “ಅತ್ತೆ ಎಂದರೆ ಹೆತ್ತ ತಾಯಿಗೆ ಸಮಾನ” ಎಂಬ ಮಾತನ್ನು ಇಲ್ಲೊಬ್ಬಳು ಸೊಸೆ ಅನ್ವರ್ಥಗೊಳಿಸಿದ್ದಾಳೆ. ಕೇವಲ 500 ರೂಪಾಯಿ ವೃದ್ಧಾಪ್ಯ ವೇತನಕ್ಕಾಗಿ (Pension) ಧಗಧಗಿಸುವ ಸುಡುವ ಬಿಸಿಲಿನಲ್ಲಿ, ರಸ್ತೆ ಸಂಪರ್ಕವಿಲ್ಲದ ಹಳ್ಳ-ಕೊಳ್ಳಗಳ ಹಾದಿಯಲ್ಲಿ ಬರೋಬ್ಬರಿ 5 ಕಿಲೋಮೀಟರ್ ದೂರ ತನ್ನ 90 ವರ್ಷದ ವೃದ್ಧ ಅತ್ತೆಯನ್ನು ಬೆನ್ನಿನ ಮೇಲೆ ಹೊತ್ತುಕೊಂಡು ಬ್ಯಾಂಕ್ಗೆ ಕರೆತಂದಿರುವ ಹೃದಯಸ್ಪರ್ಶಿ ಘಟನೆ ಛತ್ತೀಸ್ಗಢದಲ್ಲಿ ನಡೆದಿದೆ.
ಛತ್ತೀಸ್ಗಢದ ಸರ್ಗುಜಾ ಜಿಲ್ಲೆಯ ಮೈನ್ಪಾಟ್ ಬ್ಲಾಕ್ ವ್ಯಾಪ್ತಿಯಲ್ಲಿ ನಡೆದ ಈ ಮನಕಲಕುವ ಘಟನೆಯ ವಿಡಿಯೋ ಹಾಗೂ ಛಾಯಾಚಿತ್ರಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಸಾರ್ವಜನಿಕರ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡಿದೆ.
ಕುನಿಯಾ ಗ್ರಾಮದ ಜಂಗಲ್ಪಾರಾ ನಿವಾಸಿಯಾದ ಸುಖ್ಮನಿಯಾ ಎಂಬಾಕೆ ತನ್ನ 90 ವರ್ಷದ ಅತ್ತೆ ಸೋನ್ವಾರಿ ಅವರನ್ನು ಬೆನ್ನಿನ ಮೇಲೆ ಹೊತ್ತುಕೊಂಡು 5 ಕಿ.ಮೀ ಕಾಲ್ನಡಿಗೆಯಲ್ಲೇ ಸಾಗಿ ಸೆಂಟ್ರಲ್ ಬ್ಯಾಂಕ್ ತಲುಪಿದ್ದಾಳೆ. ಬ್ಯಾಂಕ್ಗೆ ಬಂದ ನಂತರ ಆಕೆಗೆ ಕಳೆದ 3 ತಿಂಗಳಿನಿಂದ ತಾಂತ್ರಿಕ ಕಾರಣಗಳಿಂದ ನಿಂತುಹೋಗಿದ್ದ ಒಟ್ಟು 1,500 ರೂಪಾಯಿ ವೃದ್ಧಾಪ್ಯ ವೇತನದ ಹಣವನ್ನು ಕೈಗಿಡಲಾಗಿದೆ.
ಈ ಕುರಿತು ಕಣ್ಣೀರು ಹಾಕುತ್ತಾ ಮಾತನಾಡಿದ ಸೊಸೆ ಸುಖ್ಮನಿಯಾ, “ಹಿಂದೆಲ್ಲಾ ‘ಬ್ಯಾಂಕ್ ಮಿತ್ರ’ (ಬ್ಯಾಂಕ್ ಪ್ರತಿನಿಧಿ) ನಮ್ಮ ಮನೆಗೇ ಬಂದು ಪೆನ್ಷನ್ ಹಣ ನೀಡುತ್ತಿದ್ದ. ಆದರೆ ಇತ್ತೀಚೆಗೆ ಆತ ಮನೆಗೆ ಬರಲು ನಿರಾಕರಿಸಿದ್ದನು. ಕೆವೈಸಿ (KYC) ಅಪ್ಡೇಟ್ ಆಗದ ಕಾರಣ ಕಳೆದ ಮೂರು ತಿಂಗಳಿಂದ ಪೆನ್ಷನ್ ಸಿಗದೆ ಕಷ್ಟ ಪಡುತ್ತಿದ್ದೆವು. ಈ ಇಳಿ ವಯಸ್ಸಿನಲ್ಲಿ ಅತ್ತೆಗೆ ಕೇವಲ ಈ 500 ರೂಪಾಯಿ ಮಾತ್ರ ಆಸರೆಯಾಗಿದ್ದು, ಬೇರೆ ಯಾವುದೇ ಯೋಜನೆಯ ಲಾಭ ಸಿಗುತ್ತಿಲ್ಲ. ಹೀಗಾಗಿ ಅನಿವಾರ್ಯವಾಗಿ ಅವರನ್ನು ಹೊತ್ತುಕೊಂಡು ಬರಬೇಕಾಯಿತು” ಎಂದು ತಮ್ಮ ಅಳಲು ತೋಡಿಕೊಂಡಿದ್ದಾಳೆ.
ಜಂಗಲ್ಪಾರಾ ಗ್ರಾಮದಿಂದ ಬ್ಯಾಂಕ್ಗೆ ಬರುವ ದಾರಿಯಲ್ಲಿ ಒಂದು ದೊಡ್ಡ ಹಳ್ಳ (ನಾಲಾ) ಸಿಗುತ್ತದೆ. ಆ ಭಾಗಕ್ಕೆ ಯಾವುದೇ ರಸ್ತೆ ಸಂಪರ್ಕವಾಗಲಿ ಅಥವಾ ವಾಹನಗಳ ಸೌಕರ್ಯವಾಗಲಿ ಇಲ್ಲದ ಕಾರಣ ಗ್ರಾಮಸ್ಥರು ಪಾದಯಾತ್ರೆಯನ್ನೇ ನೆಚ್ಚಿಕೊಳ್ಳಬೇಕಾಗಿದೆ. ಅತ್ತೆ ಸೋನ್ವಾರಿ ಅವರಿಗೆ ವಯೋಸಹಜವಾಗಿ ನಡೆಯಲು ಸಾಧ್ಯವಾಗದ ಕಾರಣ, ಸೊಸೆ ಸುಖ್ಮನಿಯಾ ಧೈರ್ಯಗೆಡದೆ ಅತ್ತೆಯನ್ನು ತನ್ನ ಬೆನ್ನ ಮೇಲೆ ಕೂರಿಸಿಕೊಂಡು ಕಷ್ಟದ ಹಾದಿಯಲ್ಲಿ ನಡೆದು ಬಂದಿದ್ದಾಳೆ.
ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ನರ್ಮದಾನಗರ ಸೆಂಟ್ರಲ್ ಬ್ಯಾಂಕ್ ಮ್ಯಾನೇಜರ್ ಮಿರ್ಜಾ ಅಲ್ತಾಫ್ ಬೇಗ್ ಸ್ಪಷ್ಟನೆ ನೀಡಿದ್ದಾರೆ. ಮೈನ್ಪಾಟ್ ಪ್ರದೇಶದಲ್ಲಿ ವೃದ್ಧರಿಗೆ ಮನೆಗೇ ಪೆನ್ಷನ್ ತಲುಪಿಸಲು 8 ಜನ ಬ್ಯಾಂಕ್ ಮಿತ್ರರು ಕೆಲಸ ಮಾಡುತ್ತಿದ್ದಾರೆ. ವೃದ್ಧರ ಕುಟುಂಬದವರು ಬ್ಯಾಂಕ್ಗೆ ಬಂದು ಮುಂಚಿತವಾಗಿ ಮಾಹಿತಿ ನೀಡಿದರೆ, ಬ್ಯಾಂಕ್ ಪ್ರತಿನಿಧಿಯನ್ನು ಅವರ ಮನೆಗೇ ಕಳುಹಿಸಲಾಗುತ್ತದೆ. ಆದರೆ, ಸೋನ್ವಾರಿ ಅವರ ಕುಟುಂಬದವರು ನಮಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಇನ್ನು ಮುಂದೆ ವೃದ್ಧೆಯನ್ನು ಬ್ಯಾಂಕ್ಗೆ ಕರೆತರುವ ಅಗತ್ಯವಿಲ್ಲ, ಬ್ಯಾಂಕ್ ಮಿತ್ರ ಅವರ ಮನೆಗೇ ಹೋಗಿ ಹಣ ತಲುಪಿಸಲಿದ್ದಾನೆ ಎಂದು ಭರವಸೆ ನೀಡಿದ್ದಾರೆ.
ಈ ದೃಶ್ಯಗಳು ಇಂಟರ್ನೆಟ್ನಲ್ಲಿ ಹರಿದಾಡುತ್ತಿದ್ದಂತೆ ನೆಟ್ಟಿಗರು ಸೊಸೆ ಸುಖ್ಮನಿಯಾಳ ಮಾತೃಪ್ರೇಮ, ತಾಳ್ಮೆ ಮತ್ತು ಧೈರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ. ಅದೇ ಸಮಯದಲ್ಲಿ, “ಡಿಜಿಟಲ್ ಇಂಡಿಯಾ” ಮತ್ತು “ಮನೆ ಬಾಗಿಲಿಗೆ ಸೇವೆ” ಎಂದು ಬಿಗಿಯುಣ್ಣುವ ಸರ್ಕಾರಿ ವ್ಯವಸ್ಥೆಗಳು ಮತ್ತು ಕಲ್ಯಾಣ ಯೋಜನೆಗಳು ಹಳ್ಳಿಗಳ ಕಟ್ಟಕಡೆಯ ಜನರಿಗೆ ಇನ್ನೂ ತಲುಪದಿರುವ ಕುರಿತು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.