ಆನೇಕಲ್: ತಾಲೂಕಿನ ಪ್ರಮುಖ ವಾಣಿಜ್ಯ ಪ್ರದೇಶದಲ್ಲಿ ನಿಷೇಧಿತ ತಂಬಾಕು ಉತ್ಪನ್ನಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದ ಮಳಿಗೆಯೊಂದರ ಮೇಲೆ ಆನೇಕಲ್ ಪೊಲೀಸರು ಯಶಸ್ವಿ ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಅಪಾರ ಪ್ರಮಾಣದ ತಂಬಾಕು ಹಾಗೂ ಹುಕ್ಕಾ ಸಾಮಗ್ರಿಗಳನ್ನು ಜಪ್ತಿ ಮಾಡಲಾಗಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ಆನೇಕಲ್ ಬಸ್ ನಿಲ್ದಾಣದ ಸನಿಹದಲ್ಲೇ ಇರುವ ಕೇರಳ ಮೂಲದ ‘ಹೈ ಲೈಟ್ ಸೂಪರ್ ಮಾರ್ಕೆಟ್’ ಮಳಿಗೆಯಲ್ಲಿ ನಿಷೇಧಿತ ತಂಬಾಕು ಉತ್ಪನ್ನಗಳು ಮತ್ತು ಹುಕ್ಕಾ ಸರಕುಗಳನ್ನು ಕಾನೂನುಬಾಹಿರವಾಗಿ ಮಾರಾಟ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರ ತಂಡ ಮಳಿಗೆಯ ಮೇಲೆ ದಿಢೀರ್ ದಾಳಿ ನಡೆಸಿದೆ.
ಅಕ್ರಮವಾಗಿ ನಿಷೇಧಿತ ವಸ್ತುಗಳನ್ನು ದಾಸ್ತಾನು ಮಾಡಿ ಮಾರಾಟ ಮಾಡುತ್ತಿದ್ದ ಆರೋಪದಡಿ ಸೂಪರ್ ಮಾರ್ಕೆಟ್ನಲ್ಲಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಎ1 ರಹೀಶ್ ಪಿ., ಎ2 ಸೆಜು, ಎ3 ಯೋಗೀಶ್ ಮತ್ತು ಎ4 ಕಿಶೋರ್ ಕುಮಾರ್ ಎಂದು ಗುರುತಿಸಲಾಗಿದೆ.
ದಾಳಿಯ ವೇಳೆ ಪೊಲೀಸರು ಮಳಿಗೆಯಲ್ಲಿದ್ದ ವಿವಿಧ ಫ್ಲೇವರ್ಗಳ ಸಿಗರೇಟ್ ಪ್ಯಾಕ್ಗಳು ಹಾಗೂ ಹುಕ್ಕಾ ಸರಕುಗಳನ್ನು ಒಳಗೊಂಡಂತೆ ಒಟ್ಟು 171 ತಂಬಾಕು ಪದಾರ್ಥಗಳನ್ನು ವಶಪಡಿಸಿಕೊಂಡಿದ್ದಾರೆ. ಇದರೊಂದಿಗೆ ಅಕ್ರಮವಾಗಿ ಇಟ್ಟಿದ್ದ 22 ಹುಕ್ಕಾ ಜಾಡಿಗಳು ಹಾಗೂ 7 ಬಾಕ್ಸ್ ಪೊಲೋ ಚಾರ್ಕೋಲ್ (Polo Charcoal) ಬಾಕ್ಸ್ಗಳನ್ನು ಜಪ್ತಿ ಮಾಡಲಾಗಿದೆ. ವಶಪಡಿಸಿಕೊಳ್ಳಲಾದ ಒಟ್ಟು ನಿಷೇಧಿತ ತಂಬಾಕು ಉತ್ಪನ್ನಗಳ ಅಂದಾಜು ಮೌಲ್ಯ 40,000 ರೂಪಾಯಿಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಸರ್ಕಾರ ನಿಷೇಧಿಸಿರುವ ತಂಬಾಕು ಮತ್ತು ಹುಕ್ಕಾ ನಿಯಂತ್ರಣ ಕಾಯ್ದೆ 24 ಹಾಗೂ ಕೋಟ್ಪಾ-2003 (COTPA-2003) ಅಡಿಯಲ್ಲಿ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಆನೇಕಲ್ ಪೊಲೀಸ್ ಇನ್ಸ್ಪೆಕ್ಟರ್ ಪ್ರಕಾಶ್ ಆರ್. ಅವರ ಸೂಕ್ತ ಮಾರ್ಗದರ್ಶನದಲ್ಲಿ, ಸಬ್ ಇನ್ಸ್ಪೆಕ್ಟರ್ (ಎಸ್ಐ) ಸಿದ್ದನಗೌಡರ ಹಾಗೂ ಸಿಬ್ಬಂದಿಯನ್ನೊಳಗೊಂಡ ತಂಡ ಈ ಯಶಸ್ವಿ ಕಾರ್ಯಾಚರಣೆಯನ್ನು ನಡೆಸಿದೆ.