ಬೆಂಗಳೂರಿನ ಡಿ ಗ್ರೂಪ್ ಲೇಔಟ್ನ ಲಿಂಗಧೀರನಹಳ್ಳಿಯ ನಿವಾಸಿಯೊಬ್ಬರು ಕಳೆದ ಮಾರ್ಚ್ 20ರಂದು ಕುಟುಂಬ ಸಮೇತ ಕಾಶಿ ತೀರ್ಥಯಾತ್ರೆಗೆ ತೆರಳಿದ್ದಾಗ ಈ ಕನ್ನ ಕಳವು ನಡೆದಿತ್ತು. ಮಾರ್ಚ್ 28ರಂದು ಮನೆಯ ಕೆಲಸದವರು ಬಂದು ನೋಡಿದಾಗ ಕಳ್ಳತನ ಬೆಳಕಿಗೆ ಬಂದಿದ್ದು, ತಕ್ಷಣ ಮಾಲೀಕರಿಗೆ ಮಾಹಿತಿ ನೀಡಿದ್ದರು. ಮಾಲೀಕರು ಅಂದೇ ರಾತ್ರಿ ವಾಪಸ್ ಬಂದು ಪರಿಶೀಲಿಸಿದಾಗ ಬೀರುವಿನಲ್ಲಿದ್ದ ಚಿನ್ನ, ಬೆಳ್ಳಿ ಹಾಗೂ ನಗದು ಕಳುವಾಗಿರುವುದು ದೃಢಪಟ್ಟಿತ್ತು. ಈ ಕುರಿತು ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದ ತನಿಖೆಯನ್ನು ಭೇದಿಸಲು ವಾಯುವ್ಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ. ನಾಗೇಶ್ ಡಿ ಎಲ್ ರವರು ಮಾರ್ಗದರ್ಶನ ನೀಡಿದ್ದರು. ಅವರ ಸೂಚನೆಯ ಮೇರೆಗೆ, ಪೀಣ್ಯ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ. ಅಶೋಕ್ ಎಂ ಎಸ್ ರವರ ನೇತೃತ್ವದಲ್ಲಿ ತಂಡವನ್ನು ರಚಿಸಲಾಯಿತು. ತನಿಖೆಯನ್ನು ಚುರುಕುಗೊಳಿಸಿದ ಬ್ಯಾಡರಹಳ್ಳಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಶ್ರೀ. ಸಿ ಭಾಸ್ಕರ್ ಮತ್ತು ಅವರ ಸಿಬ್ಬಂದಿಗಳ ತಂಡವು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಕಳ್ಳರ ಪತ್ತೆಗೆ ಜಾಲ ಬೀಸಿದ್ದರು.
ಕೊನೆಗೆ, ಚಿಕ್ಕಮಗಳೂರಿನ ಲಕ್ಕವಳ್ಳಿ ಪೊಲೀಸ್ ಠಾಣೆಯ ಮತ್ತೊಂದು ಪ್ರಕರಣದಲ್ಲಿ ಸಿಕ್ಕಿಬಿದ್ದು ಜಿಲ್ಲಾ ಕಾರಾಗೃಹದಲ್ಲಿದ್ದ ಇಬ್ಬರು ಆರೋಪಿಗಳನ್ನು ಈ ತಂಡವು ಮಾನ್ಯ ನ್ಯಾಯಾಲಯದ ಆದೇಶದ ಮೇರೆಗೆ ಬಾಡಿ ವಾರೆಂಟ್ ಮುಖೇನ 14 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆದುಕೊಂಡಿತು. ಸುದೀರ್ಘ ವಿಚಾರಣೆಯ ನಂತರ ಕಳ್ಳರು ತಪ್ಪು ಒಪ್ಪಿಕೊಂಡಿದ್ದು, ಅವರು ಮಂಗಳೂರಿನ ಜ್ಯೂವೆಲ್ಲರಿ ಅಂಗಡಿಯಲ್ಲಿ ಮಾರಾಟ ಮಾಡಿದ್ದ 470 ಗ್ರಾಂ ಚಿನ್ನಾಭರಣ, 750 ಗ್ರಾಂ ಬೆಳ್ಳಿಯ ವಸ್ತುಗಳು, 1.43 ಲಕ್ಷ ನಗದು ಮತ್ತು ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸ್ ತಂಡ ಯಶಸ್ವಿಯಾಗಿದೆ. ಈ ಕಾರ್ಯಾಚರಣೆಯಿಂದ ಬ್ಯಾಡರಹಳ್ಳಿ ಹಾಗೂ ಪೀಣ್ಯ ಪೊಲೀಸ್ ಠಾಣೆಯ ತಲಾ ಒಂದೊಂದು ಕನ್ನ ಕಳವು ಪ್ರಕರಣಗಳು ಯಶಸ್ವಿಯಾಗಿ ಪತ್ತೆಯಾಗಿವೆ.
ವರದಿ :- ಮೋಹನ್ ಕುಮಾರ್ ಎಸ್ ನಾಯ್ಕ್