Share News

ಚಿಕ್ಕಮಗಳೂರು: ಬೆಳ್ಳಿ ಹೂಡಿಕೆಯ ಹೆಸರಿನಲ್ಲಿ ನಿವೃತ್ತ ನೌಕರರೊಬ್ಬರಿಗೆ ನಕಲಿ ಬೆಳ್ಳಿಗಟ್ಟಿ ನೀಡಿ, ಬರೋಬ್ಬರಿ ₹45.20 ಲಕ್ಷ ಹಣ ಪಡೆದು ವಂಚಿಸಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ಚಿಕ್ಕಮಗಳೂರು ನಗರ ಠಾಣೆಯ ಪೊಲೀಸರು ಅತ್ಯಂತ ಯಶಸ್ವಿಯಾಗಿ ಬಂಧಿಸಿದ್ದಾರೆ. ಬಂಧಿತನಿಂದ ವಂಚನೆ ಮಾಡಿದ್ದ ಒಟ್ಟು ಮೊತ್ತದಲ್ಲಿ ಶೇ. 90 ಕ್ಕೂ ಹೆಚ್ಚು, ಅಂದರೆ ₹41.90 ಲಕ್ಷ ನಗದು ಹಣವನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸ್ ತಂಡ ಯಶಸ್ವಿಯಾಗಿದೆ.

ದೂರಿನ ಅನ್ವಯ, ನಿವೃತ್ತ ನೌಕರರೊಬ್ಬರು ತಮಗೆ ಸೇರಿದ ಮನೆ ಮಾರಾಟ ಮಾಡಿ ಬಂದಿದ್ದ ಹಣವನ್ನು ಸುರಕ್ಷಿತವಾಗಿ ಬೆಳ್ಳಿಯ ಮೇಲೆ ಹೂಡಿಕೆ ಮಾಡಲು ನಿರ್ಧರಿಸಿದ್ದರು. ಇದನ್ನು ಬಂಡವಾಳ ಮಾಡಿಕೊಂಡ ಅವರ ಪರಿಚಯಸ್ಥರೇ ಆದ ವಂಚಕರು, ಒಟ್ಟು 50.830 ಕೆ.ಜಿ ತೂಕದ ಬೆಳ್ಳಿಗಟ್ಟಿಯನ್ನು ನೀಡಿ ಅವರಿಂದ ಬರೋಬ್ಬರಿ ₹45.20 ಲಕ್ಷ ಹಣವನ್ನು ಪಡೆದುಕೊಂಡಿದ್ದರು.

​ಆದರೆ, ನಂತರದ ದಿನಗಳಲ್ಲಿ ಅದರಲ್ಲಿ 16 ಕೆ.ಜಿ ತೂಕದ ಬೆಳ್ಳಿಗಟ್ಟಿ ಸಂಪೂರ್ಣ ನಕಲಿ ಎಂಬ ಕಹಿ ಸತ್ಯ ಸಂತ್ರಸ್ತ ನಿವೃತ್ತ ನೌಕರನಿಗೆ ಬೆಳಕಿಗೆ ಬಂದಿದೆ. ಈ ಬಗ್ಗೆ ಅವರು ವಂಚಕರನ್ನು ತರಾಟೆಗೆ ತೆಗೆದುಕೊಂಡು ಪ್ರಶ್ನಿಸಿದಾಗ, “ನಿಮ್ಮ ಪೂರ್ತಿ ಹಣವನ್ನು ನಾವು ವಾಪಸ್ ನೀಡುತ್ತೇವೆ, ಮೊದಲು ಆ ಬೆಳ್ಳಿಗಟ್ಟಿಗಳನ್ನು ನಮಗೆ ಕೊಡಿ” ಎಂದು ನಂಬಿಸಿದ್ದಾರೆ. ನೌಕರನು ಇಡೀ ಬೆಳ್ಳಿಯನ್ನು ವಾಪಸ್ ನೀಡಿದ ತಕ್ಷಣ, ವಂಚಕರು ಇತ್ತ ಹಣವನ್ನೂ ನೀಡದೆ, ಅತ್ತ ಬೆಳ್ಳಿಯನ್ನೂ ಕೊಡದೆ ಸಂಪೂರ್ಣವಾಗಿ ನಾಪತ್ತೆಯಾಗಿ ವಂಚಿಸಿದ್ದರು.

ಬೆಂಕಿ ಬಿದ್ದ ತಕ್ಷಣ ಕಾರ್ಯಪ್ರವೃತ್ತರಾದ ಚಿಕ್ಕಮಗಳೂರು ನಗರ ಠಾಣೆಯ ದಕ್ಷ ಪೊಲೀಸ್ ನಿರೀಕ್ಷಕರಾದ ಅಭಯ್ ಪ್ರಕಾಶ್ ಸೋಮನಾಳ್ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ಆರೋಪಿಯ ಸುಳಿವು ಬೆನ್ನತ್ತಿದ ತಂಡವು ಭರ್ಜರಿ ಕಾರ್ಯಾಚರಣೆ ನಡೆಸಿ ಪ್ರಮುಖ ಆರೋಪಿಯನ್ನು ಹೆಡೆಮುರಿ ಕಟ್ಟಿದೆ. ಬಂಧಿತನಿಂದ ₹41.90 ಲಕ್ಷ ನಗದನ್ನು ವಶಪಡಿಸಿಕೊಳ್ಳಲಾಗಿದ್ದು, ಉಳಿದ ಹಣ ಹಾಗೂ ಪ್ರಕರಣದಲ್ಲಿ ಭಾಗಿಯಾಗಿರುವ ಇತರರ ಪತ್ತೆಗಾಗಿ ತನಿಖೆ ಮುಂದುವರೆದಿದೆ.

ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಶ್ಲಾಘನೀಯ ಪೊಲೀಸ್ ತಂಡ:

​ಪಿಎಸ್‌ಐಗಳು: ಸುನೀತ ಕೆ.ಆರ್ ಮತ್ತು ಧನರಾಜ್ ಟಿ.ಎಂ

​ಪೊಲೀಸ್ ಸಿಬ್ಬಂದಿ: ನಂಜಪ್ಪ ಹೆಚ್.ಎಸ್, ಪ್ರದೀಪ, ಹೆಚ್.ಜಿ. ನವೀನ್, ಮಂಜುನಾಥ್, ರವೀಂದ್ರ ಮತ್ತು ಮಹಮ್ಮದ್ ರಫೀಕ್ ಘಾಟ್ನಿ.

​ಸಾರ್ವಜನಿಕರ ಹಣವನ್ನು ಅತ್ಯಂತ ಜಾಣ್ಮೆಯಿಂದ ಹಾಗೂ ಅತಿ ಶೀಘ್ರದಲ್ಲಿ ರಿಕವರಿ ಮಾಡಿದ ಚಿಕ್ಕಮಗಳೂರು ನಗರ ಪೊಲೀಸ್ ತಂಡದ ಈ ಯಶಸ್ವಿ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ಹಾಗೂ ಇಲಾಖೆಯಲ್ಲಿ ಭಾರಿ ಪ್ರಶಂಸೆ ವ್ಯಕ್ತವಾಗಿದೆ.

​ಅಪರಾಧ ಮತ್ತು ಕಾನೂನು ಇಲಾಖೆಯ ಕ್ಷಣಕ್ಷಣದ ಬ್ರೇಕಿಂಗ್ ಸುದ್ದಿಗಳಿಗಾಗಿ ಸದಾ ವೀಕ್ಷಿಸಿ: www.arakshakaratimesmedia.com

 


Share News