ಮೈಸೂರು: ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಬಲಪಡಿಸಲು ಮತ್ತು ಅಪರಾಧ ಮುಕ್ತ ಸಮಾಜ ನಿರ್ಮಾಣ ಮಾಡಲು ಸಾರ್ವಜನಿಕರ ಸಹಕಾರ ಅತ್ಯಗತ್ಯ. ಈ ನಿಟ್ಟಿನಲ್ಲಿ ಸಾರ್ವಜನಿಕರು ಪೊಲೀಸ್ ಇಲಾಖೆಯ ತಾಂತ್ರಿಕ ಉಪಕ್ರಮಗಳಾದ ‘KSP ಮೊಬೈಲ್ ಆ್ಯಪ್’ ಹಾಗೂ ‘ಲಾಕ್ಡ್ ಹೌಸ್ ಬೀಟ್ ಸಿಸ್ಟಮ್’ (LHBS) ಸೇವೆಗಳನ್ನು ಗರಿಷ್ಠ ಮಟ್ಟದಲ್ಲಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಮಾನ್ಯ ಮೈಸೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ (SP) ಶ್ರೀ ಮಲ್ಲಿಕಾರ್ಜುನ ಬಾಲದಂಡಿ, ಐಪಿಎಸ್ ರವರು ವಿಶೇಷ ಮನವಿ ಮಾಡಿದ್ದಾರೆ.
ಯುವ ಪೀಳಿಗೆಯನ್ನು ಹಾಳುಗೆಡವುತ್ತಿರುವ ಮಾದಕ ವಸ್ತುಗಳ (ಡ್ರಗ್ಸ್) ಜಾಲವನ್ನು ಬುಡಸಮೇತ ಕಿತ್ತೊಗೆಯಲು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಕಟು ಬದ್ಧವಾಗಿದೆ. ಈ ನಿಟ್ಟಿನಲ್ಲಿ ಇಲಾಖೆಯ ಅಧಿಕೃತ ‘KSP’ ಮೊಬೈಲ್ ಆ್ಯಪ್‌ನಲ್ಲಿ “Drug Free Karnataka” ಎಂಬ ವಿಶೇಷ ಮಾಡ್ಯೂಲ್ ಅನ್ನು ಪರಿಚಯಿಸಲಾಗಿದೆ.
ಜಿಲ್ಲೆಯ ಯಾವುದೇ ಭಾಗದಲ್ಲಿ ಮಾದಕ ವಸ್ತುಗಳ ಕಾನೂನುಬಾಹಿರ ಮಾರಾಟ, ಸಾಗಾಟ, ಶೇಖರಣೆ ಅಥವಾ ದುರ್ಬಳಕೆ ಕಂಡುಬಂದಲ್ಲಿ ಸಾರ್ವಜನಿಕರು ತಕ್ಷಣವೇ ಈ ಆ್ಯಪ್ ಮೂಲಕ ಮಾಹಿತಿಯನ್ನು ಹಂಚಿಕೊಳ್ಳಬಹುದು. ಮಾಹಿತಿ ನೀಡುವ ಸಾರ್ವಜನಿಕರ ಹೆಸರು ಹಾಗೂ ವಿವರಗಳನ್ನು ಸಂಪೂರ್ಣವಾಗಿ ಗೌಪ್ಯವಾಗಿಡಲಾಗುವುದು ಎಂದು ಎಸ್ಪಿ ಅವರು ಭರವಸೆ ನೀಡಿದ್ದಾರೆ. ಸಾರ್ವಜನಿಕರು ನಿರ್ಭೀತಿಯಿಂದ ಮಾಹಿತಿ ನೀಡಿ ಜಿಲ್ಲೆಯನ್ನು ಮಾದಕ ಮುಕ್ತಗೊಳಿಸಲು ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಪೊಲೀಸ್ ವತಿಯಿಂದ ಸಾರ್ವಜನಿಕರ ಆಸ್ತಿಪಾಸ್ತಿ ರಕ್ಷಣೆಗಾಗಿ ಜಾರಿಗೊಳಿಸಲಾಗಿರುವ ಅತ್ಯಂತ ಯಶಸ್ವಿ ಸಮುದಾಯ ಪೊಲೀಸ್ ಉಪಕ್ರಮವಾದ ‘ಲಾಕ್ಡ್ ಹೌಸ್ ಬೀಟ್ ಸಿಸ್ಟಮ್’ (LHBS) ಕುರಿತು ಎಸ್ಪಿ ಅವರು ಮಾಹಿತಿ ನೀಡಿದರು.
ಸಾರ್ವಜನಿಕರು ತಮ್ಮ ಮನೆಗಳನ್ನು ಲಾಕ್ ಮಾಡಿ, ಕುಟುಂಬ ಸಮೇತರಾಗಿ ಹೊರ ಊರುಗಳಿಗೆ ಅಥವಾ ಪ್ರವಾಸಕ್ಕೆ ತೆರಳುವ ಸಂದರ್ಭದಲ್ಲಿ ಈ LHBS ವ್ಯವಸ್ಥೆಯಡಿ ನೋಂದಾಯಿಸಿಕೊಳ್ಳಬಹುದು. ಹೀಗೆ ನೋಂದಾಯಿಸಿಕೊಂಡ ಮನೆಗಳ ಕಡೆಗೆ ಪೊಲೀಸ್ ಇಲಾಖೆಯು ವಿಶೇಷ ಗಮನ ಹರಿಸಲಿದ್ದು, ರಾತ್ರಿ ಹಾಗೂ ಹಗಲು ವೇಳೆಯ ಗಸ್ತು (ಬೀಟ್) ಸಮಯದಲ್ಲಿ ಸದರಿ ಮನೆಗಳ ನಿರಂತರ ಮೇಲ್ವಿಚಾರಣೆ ನಡೆಸಲಿದೆ. ಇದರಿಂದ ಕಳ್ಳತನ ಪ್ರಕರಣಗಳಿಗೆ ಬ್ರೇಕ್ ಹಾಕಲು ಸಾಧ್ಯವಾಗಲಿದ್ದು, ಸಾರ್ವಜನಿಕರು ಆತಂಕವಿಲ್ಲದೆ ಪ್ರವಾಸ ಕೈಗೊಳ್ಳಬಹುದು ಎಂದು ತಿಳಿಸಿದರು.
ಆಧುನಿಕ ತಂತ್ರಜ್ಞಾನದ ಈ ಎರಡೂ ಸೇವೆಗಳು ಸಾರ್ವಜನಿಕರ ಸುರಕ್ಷತೆಗಾಗಿಯೇ ಇರಲಿದ್ದು, ಮೈಸೂರು ಜಿಲ್ಲೆಯ ಪ್ರತಿಯೊಬ್ಬ ನಾಗರಿಕರು ಇದರ ಸದುಪಯೋಗ ಪಡೆದುಕೊಂಡು ಸುರಕ್ಷಿತ ಜಿಲ್ಲೆಯನ್ನಾಗಿಸಲು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕಾಗಿ ಕೋರಿದ್ದಾರೆ.
ಜಿಲ್ಲೆಯ ಕಾನೂನು ಮತ್ತು ಪೊಲೀಸ್ ಇಲಾಖೆಯ ಹೆಮ್ಮೆಯ ಜನಸ್ನೇಹಿ ಸುದ್ದಿಗಳಿಗಾಗಿ ಸದಾ ವೀಕ್ಷಿಸಿ: www.arakshakaratimesmedia.com