Share News

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಪೋಲಿಯೋ ಮುಕ್ತ ಸ್ಥಿತಿಯನ್ನು ಯಶಸ್ವಿಯಾಗಿ ಮುಂದುವರಿಸುವ ನಿಟ್ಟಿನಲ್ಲಿ, 0 ಇಂದ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೋ ಲಸಿಕೆ ನೀಡಲು ಆರೋಗ್ಯ ಇಲಾಖೆ ಸಜ್ಜಾಗಿದೆ. ಈ ಸಂಬಂಧ 2026ರ ಜೂನ್ 28 ರ ಭಾನುವಾರದಂದು ರಾಜ್ಯಾದ್ಯಂತ ‘ರಾಷ್ಟ್ರೀಯ ಲಸಿಕಾ ದಿನ (ಪಲ್ಸ್ ಪೋಲಿಯೋ)’ ಬೃಹತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾದ ರಿತ್ವಿಕ್ ಪಾಂಡೆ ಅವರು ತಿಳಿಸಿದ್ದಾರೆ.

ಭಾರತವು ಕಳೆದ 14 ವರ್ಷಗಳಿಗೂ ಹೆಚ್ಚು ಕಾಲದಿಂದ ಪೋಲಿಯೊ ಮುಕ್ತ ರಾಷ್ಟ್ರವಾಗಿ ಹೆಮ್ಮೆಯಿಂದ ಮುನ್ನಡೆಯುತ್ತಿದೆ. ಆದಾಗ್ಯೂ, ಜಗತ್ತಿನ ಕೆಲವು ಭಾಗಗಳಲ್ಲಿ ಹಾಗೂ ಭಾರತದ ನೆರೆ ರಾಷ್ಟ್ರಗಳಲ್ಲಿ ವೈಲ್ಡ್ ಪೋಲಿಯೋ ವೈರಸ್ (Wild Polio Virus) ಹರಡುವಿಕೆ ಇನ್ನೂ ಸಕ್ರಿಯವಾಗಿರುವುದರಿಂದ ದೇಶದ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಈ ಮುನ್ನೆಚ್ಚರಿಕೆ ಕ್ರಮ ಅತ್ಯಗತ್ಯವಾಗಿದೆ. ಭಾರತ ತಜ್ಞ ಸಲಹಾ ಗುಂಪಿನ (IEAG) ಶಿಫಾರಸ್ಸಿನ ಅನ್ವಯ ಈ ಬಾರಿಯ ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಮೊದಲನೇ ದಿನ (ಜೂನ್ 28): ನಿಗದಿಪಡಿಸಿದ ಎಲ್ಲಾ ಪೋಲಿಯೋ ಬೂತ್‍ಗಳಲ್ಲಿ ಬೆಳಿಗ್ಗೆಯಿಂದಲೇ ಮಕ್ಕಳಿಗೆ ಪೋಲಿಯೋ ಹನಿಗಳನ್ನು ಹಾಕಲಾಗುವುದು.

​ನಂತರದ 2 ರಿಂದ 3 ದಿನಗಳು: ಬೂತ್‌ಗಳಿಗೆ ಬರಲು ಸಾಧ್ಯವಾಗದ ಅಥವಾ ಲಸಿಕೆಯಿಂದ ವಂಚಿತರಾದ ಮಕ್ಕಳನ್ನು ಪತ್ತೆಹಚ್ಚಲು ಆರೋಗ್ಯ ಕಾರ್ಯಕರ್ತರು ನೇರವಾಗಿ ಮನೆ ಮನೆಗೆ ಭೇಟಿ ನೀಡಿ ಲಸಿಕೆ ಹಾಕಲಿದ್ದಾರೆ.

​ವಿಶೇಷ ಆದ್ಯತೆ: ವಲಸಿಗ ಸಮುದಾಯದ ಮಕ್ಕಳು, ಇಟ್ಟಿಗೆ ಭಟ್ಟಿ, ಕಟ್ಟಡ ಕಾರ್ಮಿಕರ ತಾತ್ಕಾಲಿಕ ನಿವಾಸಿಗಳು, ಹೆಚ್ಚು ಅಪಾಯದಂಚಿನಲ್ಲಿರುವ ಪ್ರದೇಶಗಳು ಹಾಗೂ ನಗರ ಪ್ರದೇಶದ ಕೊಳಗೇರಿ (ಸ್ಲಂ) ಪ್ರದೇಶಗಳಲ್ಲಿ ವಾಸಿಸುವ ಮಕ್ಕಳಿಗೆ ಈ ಅಭಿಯಾನದಲ್ಲಿ ವಿಶೇಷ ಆದ್ಯತೆ ನೀಡಲಾಗುತ್ತದೆ.

ಈ ಬೃಹತ್ ರಾಷ್ಟ್ರೀಯ ಕಾರ್ಯಕ್ರಮವನ್ನು ನೂರಕ್ಕೆ ನೂರರಷ್ಟು ಯಶಸ್ವಿಗೊಳಿಸಲು ಎಲ್ಲಾ ಇಲಾಖೆಗಳ ಸಮನ್ವಯ ಸಹಕಾರವನ್ನು ಆರೋಗ್ಯ ಇಲಾಖೆ ಬಯಸಿದೆ. ಅಭಿಯಾನದ ಕುರಿತು ಸಾರ್ವಜನಿಕರಲ್ಲಿ ವ್ಯಾಪಕ ಜಾಗೃತಿ ಮೂಡಿಸಲು ಮಾಹಿತಿ, ಶಿಕ್ಷಣ ಮತ್ತು ಸಂವಹನ (IEC) ಚಟುವಟಿಕೆಗಳನ್ನು ತೀವ್ರಗೊಳಿಸಲಾಗಿದೆ. ಎಲ್ಲಾ ಮುಖ್ಯವಾಹಿನಿ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು, ಆಕಾಶವಾಣಿ ಹಾಗೂ ಎಫ್.ಎಮ್ ವಾಹಿನಿಗಳಲ್ಲಿ ವಿಶೇಷ ಜಿಂಗಲ್ಸ್ ಮೂಲಕ ಪ್ರಚಾರ ಕೈಗೊಳ್ಳುವಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಈಗಾಗಲೇ ಅಗತ್ಯ ನಿರ್ದೇಶನ ನೀಡಲಾಗಿದೆ.

ದೇಶದ ಭವಿಷ್ಯವಾಗಿರುವ ಮಕ್ಕಳ ಆರೋಗ್ಯ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಸಾರ್ವಜನಿಕರು ಹಾಗೂ ಪೋಷಕರು ತಮ್ಮ ಮನೆಯಲ್ಲಿರುವ ಹಾಗೂ ಆಸುಪಾಸಿನಲ್ಲಿರುವ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಈ ಹಿಂದೆ ಲಸಿಕೆ ಹಾಕಿಸಿದ್ದರೂ ಸಹ, ತಪ್ಪದೇ ಮತ್ತೊಮ್ಮೆ ಪೋಲಿಯೋ ಹನಿಗಳನ್ನು ಹಾಕಿಸಿ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಅಧಿಕೃತ ಪ್ರಕಟಣೆಯಲ್ಲಿ ಅತ್ಯಂತ ಕಳಕಳಿಯಿಂದ ವಿನಂತಿಸಿದೆ.

 


Share News