Share News

ಹೈದರಾಬಾದ್/ಖಮ್ಮಂ: ಅಂತರರಾಜ್ಯ ಮಾದಕವಸ್ತು ಕಳ್ಳಸಾಗಣೆ ಜಾಲದ ವಿರುದ್ಧ ಬೃಹತ್ ಕಾರ್ಯಾಚರಣೆ ನಡೆಸಿರುವ ‘ಈಗಲ್ ಪಡೆ’ (Eagle Force), ಸುಮಾರು 1 ಕೋಟಿ ರೂಪಾಯಿ ಮೌಲ್ಯದ 200 ಕೆಜಿ ಒಣ ಗಾಂಜಾವನ್ನು ಯಶಸ್ವಿಯಾಗಿ ವಶಪಡಿಸಿಕೊಂಡಿದೆ. ಈ ಸಂಬಂಧ ಭರ್ಜರಿ ಕಾರ್ಯಾಚರಣೆ ನಡೆಸಿ ಐವರು ಆರೋಪಿಗಳನ್ನು ಬಂಧಿಸಲಾಗಿದ್ದು, ಸದ್ಯ ತಲೆಮರೆಸಿಕೊಂಡಿರುವ ಪೂರೈಕೆದಾರರು ಹಾಗೂ ಖರೀದಿದಾರರ ಪತ್ತೆಗೆ ಜಾಲ ಬೀಸಲಾಗಿದೆ.

ಆಂಧ್ರಪ್ರದೇಶ ಮತ್ತು ಒಡಿಶಾ ಗಡಿ ಪ್ರದೇಶಗಳಿಂದ ದೊಡ್ಡ ಪ್ರಮಾಣದಲ್ಲಿ ಗಾಂಜಾ ಸಂಗ್ರಹಿಸಿ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಕಣ್ಗಾವಲು ತಂಡಗಳು ಆರೋಪಿಗಳ ಚಲನವಲನದ ಮೇಲೆ ಸೂಕ್ಷ್ಮ ನಿಗಾ ಇರಿಸಿದ್ದವು. ಆರೋಪಿಗಳು ಗಾಂಜಾವನ್ನು ಸಂಗ್ರಹಿಸಿಕೊಂಡು ತೆಲಂಗಾಣ ಮತ್ತು ಮಹಾರಾಷ್ಟ್ರದ ಕಡೆಗೆ ವಾಹನಗಳಲ್ಲಿ ಸಾಗಿಸಲು ಆರಂಭಿಸಿದ್ದರು.

​ಕಾರ್ಯಾಚರಣೆಯ ಉದ್ದಕ್ಕೂ ಅಸಾಧಾರಣ ತಾಳ್ಮೆ ಹಾಗೂ ವೃತ್ತಿಪರತೆ ಪ್ರದರ್ಶಿಸಿದ ಈಗಲ್ ಪಡೆಯು ಕಳ್ಳಸಾಗಾಣಿಕೆದಾರರನ್ನು ಹಿಂಬಾಲಿಸಿತ್ತು. ವಾಹನಗಳು ಖಮ್ಮಂ ಪ್ರದೇಶಕ್ಕೆ ಪ್ರವೇಶಿಸುತ್ತಿದ್ದಂತೆ, ಖಮ್ಮಂ ಕಮಿಷನರೇಟ್‌ನ ಕೊಣಿಜೆರ್ಲಾ ಪೊಲೀಸರು ಮತ್ತು ಈಗಲ್ ಫೋರ್ಸ್ ಖಮ್ಮಂ ಘಟಕ ಜಂಟಿಯಾಗಿ ದಾಳಿ ನಡೆಸಿವೆ. ಈ ವೇಳೆ ಎರಡು ವಾಹನಗಳನ್ನು ತಡೆದು ತಪಾಸಣೆ ನಡೆಸಿದಾಗ 200 ಕೆಜಿ ಒಣ ಗಾಂಜಾ ಪತ್ತೆಯಾಗಿದ್ದು, ಅದನ್ನು ವಶಕ್ಕೆ ಪಡೆದು ಐವರನ್ನು ಬಂಧಿಸಲಾಗಿದೆ.

ಬಂಧಿತ ಐವರು ಆರೋಪಿಗಳು ಮಹಾರಾಷ್ಟ್ರ ಹಾಗೂ ತೆಲಂಗಾಣ ಮೂಲದವರಾಗಿದ್ದು, ಅವರ ವಿವರ ಈ ಕೆಳಗಿನಂತಿದೆ:

​ಅಮೋಲ್ ನಾನೋಬಾ ಗೋರ್ (35) – ಕೂಲಿ ಕಾರ್ಮಿಕ, ಲಾತೂರ್ ಜಿಲ್ಲೆ, ಮಹಾರಾಷ್ಟ್ರ.

​ಲಕ್ಷ್ಮಣ್ ನಾಗನಾಥ ಕರೆ (26) – ರೈತ, ಲಾತೂರ್ ಜಿಲ್ಲೆ, ಮಹಾರಾಷ್ಟ್ರ.

​ವಸಂತ ಜಾಧವ್ (40) – ಕಾರ್ಮಿಕ, ಕಾಮರೆಡ್ಡಿ ಜಿಲ್ಲೆ, ತೆಲಂಗಾಣ.

​ಶೇಕ್ ಅನ್ಸಾರ್ (32) – ಚಾಲಕ, ಕಾಮರೆಡ್ಡಿ ಜಿಲ್ಲೆ, ತೆಲಂಗಾಣ.

​ಶೈಕ್ ರಹಮತ್ (30) – ಚಾಲಕ, ಕಾಮರೆಡ್ಡಿ ಜಿಲ್ಲೆ, ತೆಲಂಗಾಣ.

ವಶಪಡಿಸಿಕೊಂಡ ಗಾಂಜಾ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಂದಾಜು 1 ಕೋಟಿ ರೂಪಾಯಿ ಮೌಲ್ಯದ್ದಾಗಿದೆ ಎನ್ನಲಾಗಿದೆ. ಗಾಂಜಾ ಸಾಗಾಟಕ್ಕೆ ಬಳಸಿದ್ದ ವಾಹನಗಳನ್ನು ಜಪ್ತಿ ಮಾಡಲಾಗಿದ್ದು, ಕೊಣಿಜೆರ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.

 


Share News