Share News

ಕಳೆದ ಕೆಲವು ದಿನಗಳಿಂದ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನಾದ್ಯಂತ ರೈತರ ಜಮೀನುಗಳಿಗೆ ನುಗ್ಗಿ ಬೆಳೆ ಹಾನಿ ಮಾಡುತ್ತಾ ತೀವ್ರ ಆತಂಕ ಸೃಷ್ಟಿಸಿದ್ದ ಸುಮಾರು 35 ವರ್ಷದ ಗಂಡಾನೆಯನ್ನು ಕೊನೆಗೂ ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಹಾಗೂ ಆನೆ ಕಾರ್ಯಪಡೆ (ETF) ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

​ತಾಲೂಕಿನ ಚಿಕ್ಕಮಣ್ಣುಗುಡ್ಡೆ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಈ ಭರ್ಜರಿ ಕಾರ್ಯಾಚರಣೆ ನಡೆದಿದ್ದು, ಸೆರೆಹಿಡಿದ ಪುಂಡಾನೆಯನ್ನು ಪ್ರಾಥಮಿಕ ಪ್ರಕ್ರಿಯೆಗಳ ನಂತರ ಸುರಕ್ಷಿತವಾಗಿ ಮತ್ತೊಂದು ದಟ್ಟ ಅರಣ್ಯ ಪ್ರದೇಶಕ್ಕೆ ವಾಪಸ್ ಬಿಡಲಾಗಿದೆ ಎಂದು ತಿಳಿದುಬಂದಿದೆ.

ಚಿಕ್ಕಮಣ್ಣುಗುಡ್ಡೆ ಬಳಿ ಪುಂಡಾನೆ ಬೀಡು ಬಿಟ್ಟಿರುವ ಖಚಿತ ಮಾಹಿತಿ ಆಧರಿಸಿದ ಅರಣ್ಯ ಇಲಾಖೆ ಸಿಬ್ಬಂದಿ, ಜಾಗರೂಕತೆಯಿಂದ ಕಾರ್ಯಾಚರಣೆ ಆರಂಭಿಸಿದರು. ಆನೆಯನ್ನು ಸಮೀಪಿಸಿದ ಅರಣ್ಯ ಇಲಾಖೆಯ ತಜ್ಞ ವೈದ್ಯರ ತಂಡ ಯಶಸ್ವಿಯಾಗಿ ಅರವಳಿಕೆ ಚುಚ್ಚುಮದ್ದು (Tranquilizer) ನೀಡಿತು. ಅರವಳಿಕೆ ಪ್ರಭಾವದಿಂದ ಆನೆ ಪ್ರಜ್ಞೆ ತಪ್ಪುತ್ತಿದ್ದಂತೆ, ಅದರ ಮೇಲೆ ನೀರು ಸುರಿದು ಮಂಪರು ಕಡಿಮೆ ಮಾಡಲಾಯಿತು. ಬಳಿಕ ವೈದ್ಯರು ಆನೆಯ ಆರೋಗ್ಯ ಸ್ಥಿತಿಯ ಕುರಿತು ಸಂಪೂರ್ಣ ತಪಾಸಣೆ ನಡೆಸಿದರು.

ಕಾಡಾನೆಯನ್ನು ಹದ್ದುಬಸ್ತಿಗೆ ತರಲು ನಾಗರಹೊಳೆ ಮತ್ತು ದುಬಾರೆ ಆನೆ ಶಿಬಿರಗಳ ಅತ್ಯಂತ ಅನುಭವಿ ಸಾಕಾನೆಗಳನ್ನು ಬಳಸಿಕೊಳ್ಳಲಾಗಿತ್ತು. ಇಲಾಖೆಯ ಹೆಮ್ಮೆಯ ಸಾಕಾನೆಗಳಾದ ಧನಂಜಯ, ಹರ್ಷ, ಈಶ್ವರ, ಸುಗ್ರೀವ, ಮಹೇಂದ್ರ ಹಾಗೂ ಏಕಲವ್ಯ ಎಂಬ 6 ಕುಮ್ಕಿ ಆನೆಗಳು ಕಾರ್ಯಾಚರಣೆಯ ಮುಂಚೂಣಿಯಲ್ಲಿದ್ದು, ಪುಂಡಾನೆಯನ್ನು ಸುತ್ತುವರೆದು ಕಟ್ಟಿಹಾಕಲು ಪ್ರಮುಖ ಪಾತ್ರ ವಹಿಸಿದವು.

ರಾಮನಗರ ಅರಣ್ಯ ಉಪ ಸಂರಕ್ಷಣಾಧಿಕಾರಿ (DCF) ರಾಮಕೃಷ್ಣಪ್ಪ ಹಾಗೂ ಚನ್ನಪಟ್ಟಣ ವಲಯ ಅರಣ್ಯಾಧಿಕಾರಿ (RFO) ಮಲ್ಲೇಶ್ ಅವರ ನೇರ ನೇತೃತ್ವದಲ್ಲಿ ಈ ಬೃಹತ್ ಕಾರ್ಯಾಚರಣೆ ನಡೆಯಿತು. ಕಾರ್ಯಾಚರಣೆಯಲ್ಲಿ ಮಾವುತರು, ಕಾವಾಡಿಗರು, ವನ್ಯಜೀವಿ ವೈದ್ಯರು, ಶೂಟರ್‌ಗಳು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಸೇರಿದಂತೆ ಸುಮಾರು 80ಕ್ಕೂ ಹೆಚ್ಚು ಮಂದಿ ಪಾಲ್ಗೊಂಡು ಯಶಸ್ವಿಗೊಳಿಸಿದರು.

​ಪುಂಡಾನೆ ಸೆರೆಯಾಗಿರುವುದರಿಂದ ಚನ್ನಪಟ್ಟಣ ಭಾಗದ ರೈತರು ಹಾಗೂ ಸಾರ್ವಜನಿಕರು ಕೊನೆಗೂ ನಿಟ್ಟುಸಿರು ಬಿಡುವಂತಾಗಿದೆ.

 


Share News