ಬೆಂಗಳೂರು: ಸಿಲಿಕಾನ್ ಸಿಟಿಯ ಪಾದಚಾರಿಗಳ ಸುಗಮ ಮತ್ತು ಸುರಕ್ಷಿತ ಸಂಚಾರಕ್ಕಾಗಿ ನೂತನ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಇಂದಿನಿಂದ ಭರ್ಜರಿ ಕಾರ್ಯಾಚರಣೆ ಆರಂಭಿಸಿದೆ. ಸುಪ್ರೀಂ ಕೋರ್ಟ್ ನೀಡಿರುವ ಕಟ್ಟುನಿಟ್ಟಿನ ನಿರ್ದೇಶನದ ಅನ್ವಯ, ಜಿಬಿಎ ವ್ಯಾಪ್ತಿಯ 5 ನಗರ ಪಾಲಿಕೆಗಳಲ್ಲಿ “ಸುರಕ್ಷ ಪಾದಚಾರಿ ಮಾರ್ಗ ಅಭಿಯಾನ” ಇಂದಿನಿಂದ (ಜುಲೈ 1) ಅಧಿಕೃತವಾಗಿ ಜಾರಿಗೆ ಬಂದಿದ್ದು, ಫುಟ್‌ಪಾತ್ ಒತ್ತುವರಿ ಮಾಡಿಕೊಂಡಿರುವ ಅಂಗಡಿ-ಮುಂಗಟ್ಟು ಹಾಗೂ ತಳ್ಳುಗಾಡಿಗಳ ವಿರುದ್ಧ ಜೆಸಿಬಿಗಳು ಗರ್ಜಿಸುತ್ತಿವೆ.
”ಪಾದಚಾರಿ ಮಾರ್ಗಗಳಲ್ಲಿ ಯಾವುದೇ ಅಡೆತಡೆಯಿಲ್ಲದೆ ಸುರಕ್ಷಿತವಾಗಿ ನಡೆಯುವುದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕು” ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರು ಈ ಹಿಂದೆ ಎಚ್ಚರಿಕೆ ನೀಡಿದ್ದರು. ಜುಲೈ 1ರ ಗಡುವು ಮುಗಿದ ಹಿನ್ನೆಲೆಯಲ್ಲಿ, ನಗರದ ಪ್ರಮುಖ ಆದ್ಯತಾ ರಸ್ತೆಗಳಲ್ಲಿ ಇಂದಿನಿಂದಲೇ ತೆರವು ಕಾರ್ಯಾಚರಣೆಗೆ ಚಾಲನೆ ನೀಡಲಾಗಿದೆ.
ಬೆಂಗಳೂರು ಕೇಂದ್ರ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ 10 ಗಂಟೆಯಿಂದಲೇ ಬಿಗ್ ಆಪರೇಷನ್ ತೀವ್ರಗೊಂಡಿದೆ. ಬಿಬಿಎಂಪಿ ಇಂಜಿನಿಯರ್‌ಗಳು, ಆರೋಗ್ಯ ಅಧಿಕಾರಿಗಳು ಹಾಗೂ ಸಂಚಾರ ಪೊಲೀಸರ ಜಂಟಿ ಪಡೆಗಳು ಜೆಸಿಬಿಗಳೊಂದಿಗೆ ಕಣಕ್ಕಿಳಿದಿವೆ. ಮೊದಲ ದಿನವೇ ಪ್ರಮುಖ ರಸ್ತೆಗಳ ಪಾದಚಾರಿ ಮಾರ್ಗಗಳ ಮೇಲಿರುವ ವಾಣಿಜ್ಯ ಸಂಸ್ಥೆಗಳ ನಾಮಫಲಕಗಳು, ಅನಧಿಕೃತ ಶೆಡ್‌ಗಳು ಹಾಗೂ ಫುಟ್‌ಪಾತ್ ಮೇಲಿಟ್ಟಿದ್ದ ವ್ಯಾಪಾರ ಸಾಮಗ್ರಿಗಳನ್ನು ಬುಲ್ಡೋಜರ್ ಮೂಲಕ ನೆಲಸಮಗೊಳಿಸಲಾಗುತ್ತಿದೆ.
ಕೇಂದ್ರ ಪಾಲಿಕೆ ವ್ಯಾಪ್ತಿಯಲ್ಲಿ ಇಂದು ಪ್ರಮುಖವಾಗಿ ಈ ಕೆಳಗಿನ ಮಾರ್ಗಗಳಲ್ಲಿ ತೆರವು ಪ್ರಕ್ರಿಯೆ ಜರುಗುತ್ತಿದೆ:
ಟ್ರಿನಿಟಿ ಜಂಕ್ಷನ್‌ನಿಂದ ಎಂ.ಜಿ. ರಸ್ತೆ ಹಾಗೂ ಎಂ.ಜಿ. ಉದ್ಯಾನದವರೆಗೆ.
100 ಅಡಿ ಇಂದಿರಾನಗರ ರಸ್ತೆಯಿಂದ ದೊಮ್ಮಲೂರು ಫ್ಲೈಓವರ್‌ವರೆಗೆ.
ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣದಿಂದ ಬೆನಗನಹಳ್ಳಿ ರೈಲ್ವೇ ಸೇತುವೆಯವರೆಗೆ.
ಜಯನಗರದ ಅಶೋಕ್ ಪಿಲ್ಲರ್‌ನಿಂದ ಮಾದಚನ್ ಪಾರ್ಕ್‌ವರೆಗೆ.
ಜಯನಗರ 8ನೇ ಮುಖ್ಯ ರಸ್ತೆ (ಕನಕನಪಾಳ್ಯ ರಸ್ತೆಯಿಂದ 15ನೇ ಅಡ್ಡ ರಸ್ತೆವರೆಗೆ).
ಜಯನಗರ 9ನೇ ಮುಖ್ಯ ರಸ್ತೆ (ಕನಕನಪಾಳ್ಯ ರಸ್ತೆಯಿಂದ 15ನೇ ಅಡ್ಡ ರಸ್ತೆವರೆಗೆ).
ಆರ್.ವಿ. ರಸ್ತೆಯ ಟೀಚರ್ಸ್ ಕಾಲೇಜಿನಿಂದ ಸೌತ್ ಎಂಡ್ ಸರ್ಕಲ್‌ವರೆಗೆ.
ನಗರದಲ್ಲಿ ಪ್ರತಿವರ್ಷ ಸಂಭವಿಸುವ ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುವವರ ಪೈಕಿ ಬರೋಬ್ಬರಿ ಶೇಕಡಾ 30 ರಷ್ಟು ಜನರು ಪಾದಚಾರಿಗಳೇ ಆಗಿರುತ್ತಾರೆ! ಫುಟ್‌ಪಾತ್‌ಗಳನ್ನು ವ್ಯಾಪಾರಸ್ಥರು ಆಕ್ರಮಿಸಿಕೊಳ್ಳುವುದರಿಂದ ಜನರು ಅನಿವಾರ್ಯವಾಗಿ ಪ್ರಾಣದ ಹಂಗು ತೊರೆದು ಮುಖ್ಯ ರಸ್ತೆಯಲ್ಲೇ ನಡೆಯಬೇಕಾದ ಪರಿಸ್ಥಿತಿ ಇತ್ತು. ಇದನ್ನು ತಡೆಯಲು ಜಿಬಿಎ ವ್ಯಾಪ್ತಿಯ ಸುಮಾರು 2,000 ಕಿ.ಮೀ ಆರ್ಟಿರಿಯಲ್ ಮತ್ತು ಸಬ್-ಆರ್ಟಿರಿಯಲ್ ರಸ್ತೆಗಳಲ್ಲಿ ಒತ್ತುವರಿಯನ್ನು ಸಂಪೂರ್ಣ ಬಂದ್ ಮಾಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ.
ತೆರವು ಕಾರ್ಯಾಚರಣೆಯ ಜೊತೆಗೆ ಸಂಚಾರ ವಿಭಾಗದ ಪೊಲೀಸರು ಮತ್ತೊಂದು ಬಿಗಿ ನಿಯಮ ಜಾರಿಗೆ ತಂದಿದ್ದಾರೆ. ಪಾದಚಾರಿ ಮಾರ್ಗಗಳ ಮೇಲೆ ವಾಹನ ನಿಲುಗಡೆ ಮಾಡಿದರೆ ತಕ್ಷಣವೇ ಟೋಯಿಂಗ್ ಮಾಡಲಾಗುವುದು ಹಾಗೂ ಸಿಗ್ನಲ್‌ಗಳಿಂದ 75 ಮೀಟರ್ ವ್ಯಾಪ್ತಿಯಲ್ಲಿ ವಾಹನ ಪಾರ್ಕಿಂಗ್ ಅನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಭಾರಿ ದಂಡ ವಿಧಿಸಲಾಗುವುದು ಎಂದು ಅಧಿಕಾರಿಗಳು ಕಡಕ್ ಸಂದೇಶ ರವಾನಿಸಿದ್ದಾರೆ.