ಶಿವಮೊಗ್ಗ: ಕರ್ನಾಟಕದ ಹಿರಿಯ ಪೊಲೀಸ್ ಅಧಿಕಾರಿ, ಐಜಿಪಿ ಹರ್ಷ ಪಿ.ಎಸ್. ಅವರಿಗೆ ಕುವೆಂಪು ವಿಶ್ವವಿದ್ಯಾನಿಲಯವು ವನ್ಯಜೀವಿ ಮತ್ತು ನಿರ್ವಹಣಾ ವಿಭಾಗದಲ್ಲಿ ನಡೆಸಿದ ಅಮೂಲ್ಯ ಸಂಶೋಧನೆಗಾಗಿ ‘ಡಾಕ್ಟರ್ ಆಫ್ ಫಿಲಾಸಫಿ’ (ಪಿಎಚ್ಡಿ) ಪದವಿಯನ್ನು ಘೋಷಿಸಿದೆ.
ಕುವೆಂಪು ವಿಶ್ವವಿದ್ಯಾನಿಲಯದ ವನ್ಯಜೀವಿ ಮತ್ತು ನಿರ್ವಹಣಾ ವಿಭಾಗದ ಪ್ರಾಧ್ಯಾಪಕ ಡಾ. ವಿಜಯ ಕುಮಾರ್ ಅವರ ಮಾರ್ಗದರ್ಶನದಲ್ಲಿ ಹರ್ಷ ಅವರು ಕಳೆದ ಐದು ವರ್ಷಗಳಿಂದ ತೀವ್ರವಾದ ಕ್ಷೇತ್ರ ಆಧಾರಿತ ಅಧ್ಯಯನ ನಡೆಸಿದ್ದರು. “ನಾಗರಹೊಳೆ, ಬಂಡೀಪುರ ಮತ್ತು ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಹುಲಿಗಳ ಜನಸಂಖ್ಯೆಯ ಸ್ಥಿರತೆಯ ಕುರಿತು ಒಂದು ಅಧ್ಯಯನ, ಮಾನವ-ಹುಲಿ ಸಂಘರ್ಷಕ್ಕೆ ವಿಶೇಷ ಉಲ್ಲೇಖದೊಂದಿಗೆ” ಎಂಬ ವಿಷಯದ ಕುರಿತು ಅವರು ಮಹಾಪ್ರಬಂಧ ಮಂಡಿಸಿದ್ದರು.
ತಮ್ಮ ಬಿಡುವಿಲ್ಲದ ಪೊಲೀಸ್ ಸೇವೆಯ ನಡುವೆಯೂ ಹರ್ಷ ಅವರು ಕಾಡಿನ ಆಳದಲ್ಲಿ ಕ್ಯಾಮೆರಾ ಟ್ರ್ಯಾಪಿಂಗ್ ಅಳವಡಿಕೆ ಮತ್ತು ಮಾನವ-ಹುಲಿ ಸಂಘರ್ಷದ ತಾಣಗಳ ಸೂಕ್ಷ್ಮ ವಿಶ್ಲೇಷಣೆ ಸೇರಿದಂತೆ ಸುದೀರ್ಘ ಸಂಶೋಧನೆಯಲ್ಲಿ ತೊಡಗಿದ್ದರು. ಇವರ ಈ ಅಧ್ಯಯನವು ವನ್ಯಜೀವಿ ಸಂರಕ್ಷಣೆ ಮತ್ತು ಪರಿಸರ ಸಮತೋಲನದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ ಎಂದು ಪರಿಗಣಿಸಲಾಗಿದೆ.
ಈಗಾಗಲೇ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಇವರ ಸಂಶೋಧನಾ ಪ್ರಬಂಧವನ್ನು ಔಪಚಾರಿಕವಾಗಿ ಅನುಮೋದಿಸಿ ಪದವಿ ನೀಡಲು ನಿರ್ಧರಿಸಿದೆ. ಮೇ 6, 2026 ರಂದು ನಡೆಯಲಿರುವ ಕುವೆಂಪು ವಿಶ್ವವಿದ್ಯಾನಿಲಯದ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಅವರಿಗೆ ಅಧಿಕೃತವಾಗಿ ಪಿಎಚ್ಡಿ ಪ್ರಮಾಣಪತ್ರವನ್ನು ಪ್ರದಾನ ಮಾಡಲಾಗುವುದು.
ಪೊಲೀಸ್ ಇಲಾಖೆಯ ಉನ್ನತ ಜವಾಬ್ದಾರಿಯ ಜೊತೆಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಇವರು ಸಾಧಿಸಿರುವ ಈ ಮೈಲಿಗಲ್ಲಿಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.