Share News

ಜಕಾರ್ತಾ: ಇಂಡೋನೇಷ್ಯಾದ ರಾಜಧಾನಿ ಜಕಾರ್ತಾದ ಹೊರವಲಯದಲ್ಲಿ ಮಂಗಳವಾರ ಮುಂಜಾನೆ ಎರಡು ರೈಲುಗಳ ನಡುವೆ ಸಂಭವಿಸಿದ ಭೀಕರ ಮುಖಾಮುಖಿ ಡಿಕ್ಕಿಯಲ್ಲಿ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದಾರೆ. ಈ ಭೀಕರ ದುರಂತದಲ್ಲಿ 80ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದು, ದೇಶವನ್ನೇ ಬೆಚ್ಚಿಬೀಳಿಸಿದೆ.

ಮಂಗಳವಾರ ಬೆಳಿಗ್ಗೆ ಜಕಾರ್ತಾದ ಹೊರವಲಯದಲ್ಲಿ ಈ ಅಪಘಾತ ಸಂಭವಿಸಿದೆ. ರಾತ್ರಿ ಸಂಚರಿಸುತ್ತಿದ್ದ ಎರಡು ರೈಲುಗಳು ಒಂದೇ ಹಳಿಯಲ್ಲಿ ಮುಖಾಮುಖಿ ಬಂದ ಪರಿಣಾಮ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ರೈಲುಗಳ ಬೋಗಿಗಳು ನಜ್ಜುಗುಜ್ಜಾಗಿದ್ದು, ಹಳಿ ತಪ್ಪಿವೆ.

ಘಟನೆ ನಡೆದ ತಕ್ಷಣ ಸ್ಥಳಕ್ಕೆ ಧಾವಿಸಿದ ರಕ್ಷಣಾ ಸಿಬ್ಬಂದಿ ಹಾಗೂ ತುರ್ತು ಸೇವಾ ತಂಡಗಳು ಕಾರ್ಯಾಚರಣೆ ಆರಂಭಿಸಿವೆ. ಗಾಯಗೊಂಡ 81 ಜನರನ್ನು ತಕ್ಷಣವೇ ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಅವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ರೈಲಿನ ಅವಶೇಷಗಳ ಅಡಿಯಲ್ಲಿ ಇನ್ನೂ ಕೆಲವರು ಸಿಲುಕಿಕೊಂಡಿರುವ ಸಾಧ್ಯತೆ ಇರುವುದರಿಂದ, ಕ್ರೇನ್ ಹಾಗೂ ಅತ್ಯಾಧುನಿಕ ಯಂತ್ರಗಳ ಸಹಾಯದಿಂದ ಬೋಗಿಗಳನ್ನು ತೆರವುಗೊಳಿಸುವ ಕಾರ್ಯ ನಿರಂತರವಾಗಿ ಸಾಗುತ್ತಿದೆ. ಹೀಗಾಗಿ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಭೀತಿ ವ್ಯಕ್ತವಾಗಿದೆ.

​ಅಪಘಾತಕ್ಕೆ ನಿಖರವಾದ ತಾಂತ್ರಿಕ ದೋಷ ಅಥವಾ ಮಾನವ ಸಹಜ ತಪ್ಪು ಕಾರಣವೇ ಎಂಬ ಬಗ್ಗೆ ಇಂಡೋನೇಷ್ಯಾ ಸಾರಿಗೆ ಇಲಾಖೆ ತನಿಖೆಗೆ ಆದೇಶಿಸಿದೆ.

 

ವರದಿ :- ಗಿಲ್ಬರ್ಟ್ ಜೆ 


Share News