Share News

ಬಳ್ಳಾರಿ: ವನ್ಯಜೀವಿಗಳ ಬೇಟೆ ಹಾಗೂ ಅಂಗಾಂಗಗಳ ಅಕ್ರಮ ಮಾರಾಟ ದಂಧೆಯ ವಿರುದ್ಧ ಬಳ್ಳಾರಿ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ನಿಷೇಧಿತ ಕೃಷ್ಣಮೃಗದ ಚರ್ಮವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಅಂತರಜಿಲ್ಲಾ ಪಾತಕಿಯನ್ನು ಹೆಡೆಮುರಿ ಕಟ್ಟಿದ್ದಾರೆ.

​ಬಂಧಿತ ಆರೋಪಿಯನ್ನು ಚಂದ್ರನಾಯ್ಕ್ ಎಂದು ಗುರುತಿಸಲಾಗಿದೆ. ಈತನಿಂದ ಅಕ್ರಮವಾಗಿ ಬಚ್ಚಿಡಲಾಗಿದ್ದ ಸುಮಾರು 700 ಗ್ರಾಂ ತೂಕದ ಕೃಷ್ಣಮೃಗದ ಚರ್ಮವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಆರೋಪಿಯು ಕೃಷ್ಣಮೃಗದ ಚರ್ಮವನ್ನು ಪ್ಲಾಸ್ಟಿಕ್ ಚೀಲದಲ್ಲಿ ಬಚ್ಚಿಟ್ಟುಕೊಂಡು ಬಳ್ಳಾರಿ-ಹೊಸಪೇಟೆ ರಾಷ್ಟ್ರೀಯ ಹೆದ್ದಾರಿಯ ಬಳಿ ಗ್ರಾಹಕರಿಗಾಗಿ ಕಾಯುತ್ತಿದ್ದನು. ಈ ಬಗ್ಗೆ ಸಿ.ಐ.ಡಿ. ಪೊಲೀಸ್ ಅರಣ್ಯ ಸಂಚಾರಿ ದಳದ ಅಧಿಕಾರಿಗಳಿಗೆ ಖಚಿತ ಮಾಹಿತಿ ಲಭಿಸಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಅಧಿಕಾರಿಗಳ ತಂಡ ಹೆದ್ದಾರಿಯ ಬಳಿ ಹೊಂಚು ಹಾಕಿ, ಆರೋಪಿಯನ್ನು ಸಾಕ್ಷ್ಯಾಧಾರ ಸಮೇತ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ.

ಬಂಧಿತ ಆರೋಪಿ ಚಂದ್ರನಾಯ್ಕ್ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ (Wildlife Protection Act) ಗಂಭೀರ ಪ್ರಕರಣ ದಾಖಲಿಸಲಾಗಿದೆ. ಈ ನಿಷೇಧಿತ ಕೃಷ್ಣಮೃಗದ ಚರ್ಮವನ್ನು ಎಲ್ಲಿಂದ ತರಲಾಗಿತ್ತು? ಇದರ ಹಿಂದೆ ಬೇರೆ ಯಾವುದಾದರೂ ಪ್ರಭಾವಿ ಬೇಟೆಗಾರರ ಜಾಲವಿದೆಯೇ? ಎಂಬ ಕುರಿತು ಅರಣ್ಯ ಸಂಚಾರಿ ದಳದ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

 


Share News