Share News

ಬೆಂಗಳೂರು, ಜು.16: ರಾಜ್ಯ ಪೊಲೀಸ್ ಇಲಾಖೆಯ ಎಲ್ಲಾ ದರ್ಜೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪೊಲೀಸ್ ಸಮವಸ್ತ್ರದಲ್ಲಿ ರೀಲ್ಸ್, ಫೋಟೋಶೂಟ್, ಪ್ರೀ-ವೆಡ್ಡಿಂಗ್ ಶೂಟ್, ಹಾಡು-ನೃತ್ಯ, ಬ್ಲಾಗ್, ಆಯುಧಗಳ ಪ್ರದರ್ಶನ ಸೇರಿದಂತೆ ಯಾವುದೇ ರೀತಿಯ ಫೋಟೋ ಹಾಗೂ ವಿಡಿಯೋಗಳನ್ನು ವೈಯಕ್ತಿಕ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಬೇಕೆಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿ & ಐಜಿಪಿ) ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದ್ಯಸರಾದ ಶ್ರೀ ಮೋಹನ್ ಕುಮಾರ್ ದಾನಪ್ಪರವರು ಶಿಫಾರಸ್ಸು ಮಾಡಿದ್ದಾರೆ.

ಮನವಿಯಲ್ಲಿ, ಪೊಲೀಸ್ ಸಮವಸ್ತ್ರವು ಕೇವಲ ಉಡುಪಲ್ಲ; ಅದು ಕರ್ತವ್ಯನಿಷ್ಠೆ, ಶಿಸ್ತು, ಪ್ರಾಮಾಣಿಕತೆ ಹಾಗೂ ಸಾರ್ವಜನಿಕರ ವಿಶ್ವಾಸದ ಪ್ರತೀಕವಾಗಿದೆ. ಇತ್ತೀಚಿನ ದಿನಗಳಲ್ಲಿ ಕೆಲವು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸಮವಸ್ತ್ರವನ್ನು ವೈಯಕ್ತಿಕ ಪ್ರಚಾರ ಹಾಗೂ ಸಾಮಾಜಿಕ ಜಾಲತಾಣದ ಖ್ಯಾತಿಗಾಗಿ ಬಳಸುತ್ತಿರುವುದು ಇಲಾಖೆಯ ಘನತೆ ಮತ್ತು ಗೌರವಕ್ಕೆ ಧಕ್ಕೆ ತರುತ್ತಿದೆ ಎಂದು ಉಲ್ಲೇಖಿಸಲಾಗಿದೆ.

ಮನವಿಯಲ್ಲಿ, ಕರ್ತವ್ಯದ ವೇಳೆ ರೀಲ್ಸ್ ಚಿತ್ರೀಕರಣ, ಪ್ರೀ-ವೆಡ್ಡಿಂಗ್ ಶೂಟ್, ಸರ್ಕಾರಿ ವಾಹನಗಳು, ಆಯುಧಗಳು ಹಾಗೂ ಕರ್ತವ್ಯ ನಿರ್ವಹಣೆಯ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದು ಇಲಾಖೆಯ ಶಿಸ್ತು ಹಾಗೂ ಭದ್ರತೆಗೆ ವಿರುದ್ಧವಾಗಿದೆ ಎಂದು ಹೇಳಲಾಗಿದೆ. ಇಂತಹ ಪೋಸ್ಟ್‌ಗಳಿಂದ ವಂಚಕರು ನಕಲಿ ಖಾತೆಗಳನ್ನು ತೆರೆದು ಸಾರ್ವಜನಿಕರನ್ನು ವಂಚಿಸುವ ಘಟನೆಗಳೂ ವರದಿಯಾಗಿರುವುದನ್ನು ಗಮನಕ್ಕೆ ತರಲಾಗಿದೆ.

ಇದಲ್ಲದೆ, ಭಾರತೀಯ ಪೊಲೀಸ್ ಸೇವೆ (ಸಮವಸ್ತ್ರ) ನಿಯಮಗಳು–1954, ಕರ್ನಾಟಕ ರಾಜ್ಯ ನಾಗರಿಕ ಸೇವಾ (ನಡತೆ) ನಿಯಮಗಳು–2021 ಹಾಗೂ ಸರ್ಕಾರಿ ರಹಸ್ಯಗಳ ಅಧಿನಿಯಮ–1923ರ ಉಲ್ಲಂಘನೆಯ ಸಾಧ್ಯತೆಯನ್ನೂ ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ.

ದೇಶದ ಉತ್ತರ ಪ್ರದೇಶ, ಮಧ್ಯಪ್ರದೇಶ, ಬಿಹಾರ, ತಮಿಳುನಾಡು, ಸಿಕ್ಕಿಂ, ಹಿಮಾಚಲ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಸಮವಸ್ತ್ರದಲ್ಲಿ ರೀಲ್ಸ್ ಹಾಗೂ ಫೋಟೋ ಪೋಸ್ಟ್ ಮಾಡುವುದನ್ನು ನಿರ್ಬಂಧಿಸಿ, ನಿಯಮ ಉಲ್ಲಂಘಿಸಿದವರ ವಿರುದ್ಧ ಶಿಸ್ತು ಕ್ರಮ ಕೈಗೊಂಡಿರುವ ಉದಾಹರಣೆಗಳನ್ನು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯು 2024ರ ಜುಲೈ 22ರಂದು ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸ್ಥಾಯಿ ಆದೇಶ ಹೊರಡಿಸಿದ್ದರೂ, ಅದರ ಪರಿಣಾಮಕಾರಿ ಅನುಷ್ಠಾನವಾಗಿಲ್ಲ ಎಂದು ಮನವಿ ತಿಳಿಸಿದೆ.

ಈಗಾಗಲೇ ಅಪ್‌ಲೋಡ್ ಮಾಡಿರುವ ಸಮವಸ್ತ್ರದ ಫೋಟೋ, ವಿಡಿಯೋ ಹಾಗೂ ಪ್ರೀ-ವೆಡ್ಡಿಂಗ್ ಶೂಟ್‌ಗಳನ್ನು ಸ್ವಯಂಪ್ರೇರಿತವಾಗಿ ಅಳಿಸಲು ಸೂಚನೆ.

ಪೊಲೀಸ್ ಇಲಾಖೆಯ ಸಾಮಾಜಿಕ ಜಾಲತಾಣ ಘಟಕದಿಂದ ವೈಯಕ್ತಿಕ ಖಾತೆಗಳ ಮೇಲ್ವಿಚಾರಣೆ.

ಪೊಲೀಸ್ ತರಬೇತಿ ಕೇಂದ್ರಗಳಲ್ಲಿ ಸಾಮಾಜಿಕ ಜಾಲತಾಣ ಬಳಕೆ ಮತ್ತು ಸಮವಸ್ತ್ರದ ಘನತೆ ಕುರಿತು ಕಡ್ಡಾಯ ಜಾಗೃತಿ.

ನಿಯಮ ಉಲ್ಲಂಘಿಸುವವರ ವಿರುದ್ಧ ಇಲಾಖೆ ವಿಚಾರಣೆ ನಡೆಸಿ ಶಿಸ್ತು ಕ್ರಮ ಜರುಗಿಸುವುದು.

ರಾಜ್ಯದ ಎಲ್ಲಾ ಪೊಲೀಸ್ ಆಯುಕ್ತರು, ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ಘಟಕ ಮುಖ್ಯಸ್ಥರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡುವುದು.

ಮನವಿದಾರರು, ರಾಜ್ಯ ಪೊಲೀಸ್ ಇಲಾಖೆಯ ಘನತೆ, ಶಿಸ್ತು ಹಾಗೂ ಸಾರ್ವಜನಿಕರ ವಿಶ್ವಾಸವನ್ನು ಕಾಪಾಡುವ ದೃಷ್ಟಿಯಿಂದ ಈ ಶಿಫಾರಸುಗಳನ್ನು ಪರಿಗಣಿಸಿ ತಕ್ಷಣವೇ ಕಟ್ಟುನಿಟ್ಟಿನ ಆದೇಶ ಹೊರಡಿಸುವಂತೆ ಕೋರಿದ್ದಾರೆ. ಇಲಾಖೆಯು ಈ ಕುರಿತು ಯಾವ ಕ್ರಮ ಕೈಗೊಳ್ಳಲಿದೆ ಎಂಬುದರ ಮೇಲೆ ಪೊಲೀಸ್ ವಲಯದಲ್ಲಿ ಕುತೂಹಲ ಮೂಡಿದೆ.


Share News