Share News

ತುಮಕೂರು: ಜಿಲ್ಲೆಯಲ್ಲಿ ಕಾಲೇಜು ವಿದ್ಯಾರ್ಥಿಗಳನ್ನೇ ಗುರಿಯಾಗಿಸಿಕೊಂಡು ರಾಜಾರೋಷವಾಗಿ ನಡೆಯುತ್ತಿದ್ದ ಹೈಟೆಕ್ ಮಾದಕ ವಸ್ತು ಸಾಗಾಟ ಮತ್ತು ಮಾರಾಟ ಜಾಲವನ್ನು ತಿಲಕ್ ಪಾರ್ಕ್ ಠಾಣೆಯ ಪೊಲೀಸರು ಭರ್ಜರಿ ಕಾರ್ಯಾಚರಣೆಯ ಮೂಲಕ ಧ್ವಂಸಗೊಳಿಸಿದ್ದಾರೆ. ಈ ಪ್ರಕರಣದಲ್ಲಿ ತುಮಕೂರಿನ ಪೊಲೀಸ್ ಕಾನ್ಸ್‌ಟೇಬಲ್ ಒಬ್ಬರ ಪುತ್ರ ಹಾಗೂ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಒಟ್ಟು ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

​ಬೆಂಗಳೂರು ಮೂಲದ ಪ್ರಮುಖ ಪೆಡ್ಲರ್ ಮಂಜುನಾಥ್, ಸತೀಶ್, ಪ್ರಮೋದ್ ಕುಮಾರ್, ದರ್ಶನ್, ಅಮೋಘ ನಾಗಭೂಷಣ್ ಮತ್ತು ತುಮಕೂರು ಸಮವಸ್ತ್ರ ಪಡೆಯ ಕಾನ್ಸ್‌ಟೇಬಲ್ ಪುತ್ರ ದಿಶಾಂತ್ (21) ಬಂಧಿತ ಆರೋಪಿಗಳಾಗಿದ್ದಾರೆ.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ತಿಲಕ್ ಪಾರ್ಕ್ ಠಾಣೆ ಇನ್‌ಸ್ಪೆಕ್ಟರ್ ನಧಾಪ್ ಹಾಗೂ ಪಿಎಸ್‌ಐ ಯೋಗೇಶ್ ಅವರ ನೇತೃತ್ವದ ತಂಡವು ಆರೋಪಿಗಳನ್ನು ಹೆಡೆಮುರಿ ಕಟ್ಟಿದೆ. ಬಂಧಿತರಿಂದ 2 ಲಕ್ಷ ರೂಪಾಯಿ ಮೌಲ್ಯದ 1 ಕೆಜಿ 655 ಗ್ರಾಂ ಗಾಂಜಾ ಸೊಪ್ಪು, ಭಾರಿ ಬೇಡಿಕೆಯಿರುವ 2.30 ಲಕ್ಷ ರೂಪಾಯಿ ಮೌಲ್ಯದ ಹೈಡ್ರೋವೀಡ್ ಗಾಂಜಾ ಹಾಗೂ ಸಾಗಾಟಕ್ಕೆ ಬಳಸಿದ್ದ 40 ಲಕ್ಷ ರೂಪಾಯಿ ಮೌಲ್ಯದ ಫಾರ್ಚೂನರ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ಬೆಂಗಳೂರು ಮೂಲದ ಪ್ರಮುಖ ಆರೋಪಿ ಮಂಜುನಾಥ್, ರಾಜಧಾನಿಯಿಂದ ತುಮಕೂರಿಗೆ ಗಾಂಜಾ ಮತ್ತು ಇತರೆ ಮಾದಕ ವಸ್ತುಗಳನ್ನು ತಂದು ಇಲ್ಲಿನ ಕಾಲೇಜು ವಿದ್ಯಾರ್ಥಿಗಳಿಗೆ ಸರಬರಾಜು ಮಾಡುತ್ತಿದ್ದ ಎನ್ನುವ ಆಘಾತಕಾರಿ ಅಂಶ ತನಿಖೆಯಿಂದ ಬೆಳಕಿಗೆ ಬಂದಿದೆ. ಬಂಧಿತರಲ್ಲಿ ಕೆಲವರು ಕಾಲೇಜು ವಿದ್ಯಾರ್ಥಿಗಳೇ ಆಗಿದ್ದು, ಈ ಜಾಲದಲ್ಲಿ ಭಾಗಿಯಾಗಿರುವ ಇನ್ನುಳಿದ ಪೆಡ್ಲರ್‌ಗಳ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.

ಬಂಧಿತ ಆರೋಪಿಗಳ ವಿರುದ್ಧ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ಸಂಖ್ಯೆ 81/2026ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಅತ್ಯಂತ ಕಠಿಣವಾದ ಮಾದಕ ವಸ್ತು ನಿಯಂತ್ರಣ ಕಾಯ್ದೆ (NDPS Act) ಅಡಿಯಲ್ಲಿ ಮುಂದಿನ ಕಾನೂನು ಕ್ರಮ ಜರುಗಿಸಲಾಗುತ್ತಿದೆ.

 


Share News