Share News

ನೆಲೋಗಿ: ನೆಲೋಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಣಿ ಬೈಕ್ ಕಳ್ಳತನದಲ್ಲಿ ತೊಡಗಿದ್ದ ಇಬ್ಬರು ಖತರ್ನಾಕ್ ಆರೋಪಿಗಳನ್ನು ನೆಲೋಗಿ ಠಾಣೆಯ “ವಿಶೇಷ ಅಪರಾಧ ನಿಗ್ರಹ ತಂಡ”ದ ಅಧಿಕಾರಿಗಳು ಮತ್ತು ಸಿಬ್ಬಂದಿ ಯಶಸ್ವಿಯಾಗಿ ಬಂಧಿಸಿದ್ದಾರೆ.

​ಬಂಧಿತ ಆರೋಪಿಗಳಿಂದ ಒಟ್ಟು ₹3,15,000 ಅಂದಾಜು ಮೌಲ್ಯದ 6 ಮೋಟಾರ್ ಸೈಕಲ್‌ಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.

​ನೆಲೋಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ಮೋಟಾರ್ ಸೈಕಲ್‌ಗಳು ಕಳುವಾಗುತ್ತಿದ್ದ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿದ್ದವು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಕಳ್ಳರ ಪತ್ತೆಗಾಗಿ “ವಿಶೇಷ ಅಪರಾಧ ನಿಗ್ರಹ ತಂಡ”ವನ್ನು ರಚಿಸಿ ತನಿಖೆ ಚುರುಕುಗೊಳಿಸಿದ್ದರು.

​ವಿಶ್ವಾಸಾರ್ಹ ಮಾಹಿತಿ ಹಾಗೂ ತಾಂತ್ರಿಕ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ವಿಶೇಷ ತಂಡವು, ಕೃತ್ಯದಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿತು. ವಿಚಾರಣೆ ವೇಳೆ ಆರೋಪಿಗಳು ವಿವಿಧೆಡೆ ಬೈಕ್ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ.

​ಆರೋಪಿಗಳು ನೀಡಿದ ಮಾಹಿತಿಯ ಮೇರೆಗೆ ₹3.15 ಲಕ್ಷ ಮೌಲ್ಯದ 6 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿರುವ ಪೊಲೀಸರು, ಬಂಧಿತ ಇಬ್ಬರೂ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

​ಸಮಯೋಚಿತವಾಗಿ ಕಾರ್ಯಾಚರಣೆ ನಡೆಸಿ ಕಳ್ಳರನ್ನು ಬಂಧಿಸಿ, ಕಳುವಾಗಿದ್ದ ವಾಹನಗಳನ್ನು ವಶಪಡಿಸಿಕೊಂಡ ನೆಲೋಗಿ ಠಾಣೆಯ ವಿಶೇಷ ಅಪರಾಧ ನಿಗ್ರಹ ತಂಡದ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯವೈಖರಿಯನ್ನು ಮೇಲಧಿಕಾರಿಗಳು ಮತ್ತು ಸಾರ್ವಜನಿಕರು ಶ್ಲಾಘಿಸಿದ್ದಾರೆ.

 


Share News