ಬಾಗಲಕೋಟೆ: ನಗರದ ನವನಗರದಲ್ಲಿರುವ ಧಾತ್ರಿ ಮಂಗಲ ಭವನದಲ್ಲಿ ಬಾಗಲಕೋಟೆ ಜಿಲ್ಲಾ ಪೊಲೀಸ್ ಹಾಗೂ ಬಸವನ ಬಾಗೇವಾಡಿಯ ಅಮರೇಶ್ವರ ಕ್ಲಿನಿಕ್ ಇವರ ಸಂಯುಕ್ತ ಆಶ್ರಯದಲ್ಲಿ “ಆರಕ್ಷಕರ ನಡಿಗೆ ಆರೋಗ್ಯದ ಕಡೆಗೆ” ಎಂಬ ವಿಶೇಷ ಸಂಕಲ್ಪದೊಂದಿಗೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಾಗಿ ಉಚಿತ ಆರೋಗ್ಯ ತಪಾಸಣೆ ಮತ್ತು ಉಚಿತ ಔಷಧ ವಿತರಣಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿತ್ತು.
ಅಹೋರಾತ್ರಿ ಸಾರ್ವಜನಿಕ ಸೇವೆ ಮತ್ತು ಕರ್ತವ್ಯದಲ್ಲಿ ತೊಡಗುವ ಪೊಲೀಸ್ ಸಿಬ್ಬಂದಿಯ ಆರೋಗ್ಯ ರಕ್ಷಣೆಯ ಹಿತದೃಷ್ಟಿಯಿಂದ ಆಯೋಜಿಸಲಾಗಿದ್ದ ಈ ಶಿಬಿರದಲ್ಲಿ:
ತೂಕ, ರಕ್ತದೊತ್ತಡ (BP) ಹಾಗೂ ಮಧುಮೇಹ (Sugar) ತಪಾಸಣೆ,
ಇಸಿಜಿ (ECG) ಮತ್ತು ಕಣ್ಣಿನ ತಪಾಸಣೆ,
ಎಲುಬು-ಕೀಲು ಸಮಸ್ಯೆಗಳು ಹಾಗೂ ಹೃದಯ ಸಂಬಂಧಿ ಕಾಯಿಲೆಗಳು ಸೇರಿದಂತೆ ವಿವಿಧ ಸಾಮಾನ್ಯ ರೋಗಗಳ ತಪಾಸಣೆ ನಡೆಸಲಾಯಿತು.
ತಪಾಸಣೆ ನಡೆಸಿದ ನುರಿತ ವೈದ್ಯರ ತಂಡವು ಸಿಬ್ಬಂದಿಗೆ ಸೂಕ್ತ ವೈದ್ಯಕೀಯ ಸಲಹೆ, ಅಗತ್ಯ ಔಷಧಗಳು ಹಾಗೂ ಮೇಲ್ಮಟ್ಟದ ಚಿಕಿತ್ಸೆಗೆ ಬೇಕಾದ ಮಾರ್ಗದರ್ಶನ ನೀಡಿತು.
ಈ ಉಚಿತ ಆರೋಗ್ಯ ಶಿಬಿರದಲ್ಲಿ ಬಾಗಲಕೋಟೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ (SP) ಶ್ರೀ ಸಿದ್ದಾರ್ಥ ಗೋಯಲ್, ಐ.ಪಿ.ಎಸ್. ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ (Addl. SP) ಶ್ರೀ ಎಂ. ಜಗದೀಶ, ಕೆ.ಎಸ್.ಪಿ.ಎಸ್. ಅವರು ಉಪಸ್ಥಿತರಿದ್ದು, ಸ್ವತಃ ಆರೋಗ್ಯ ತಪಾಸಣೆಗೊಳಪಟ್ಟು ಸಿಬ್ಬಂದಿಗೆ ಉತ್ತೇಜನ ನೀಡಿದರು.
ಜಿಲ್ಲೆಯ ವಿವಿಧ ಠಾಣೆಗಳ ಪೊಲೀಸ್ ಅಧಿಕಾರಿಗಳು ಹಾಗೂ ನೂರಾರು ಸಿಬ್ಬಂದಿಯವರು ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಉಚಿತ ಆರೋಗ್ಯ ತಪಾಸಣೆಯ ಪ್ರಯೋಜನ ಪಡೆದುಕೊಂಡರು.
