Share News

ಸಾಮಾನ್ಯವಾಗಿ ಪ್ರತಿಯೊಬ್ಬರೂ ತಮ್ಮ ಕನಸಿನ ಮನೆಯನ್ನು ಅತ್ಯಾಧುನಿಕ ಶೈಲಿ ಹಾಗೂ ಸುಂದರ ವಿನ್ಯಾಸದಲ್ಲಿ ನಿರ್ಮಿಸಲು ಬಯಸುತ್ತಾರೆ. ಆದರೆ ಇಲ್ಲೊಬ್ಬರು ನಿವೃತ್ತ ಲೋಕೋ ಪೈಲಟ್, ತಮ್ಮ ವೃತ್ತಿಜೀವನದ ನೆನಪನ್ನು ಸದಾ ಹಸಿರಾಗಿಡಲು ತಮ್ಮ ಮನೆಯ ಛಾವಣಿಯ ಮೇಲೆಯೇ ಬೃಹತ್ ‘ರೈಲಿನ ಮಾದರಿ’ (Train Model) ನಿರ್ಮಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಭಾರತೀಯ ರೈಲ್ವೆಯಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಲೋಕೋ ಪೈಲಟ್ ರಾಮ್ ನಿವಾಸ್ ಅವರು, ತಮ್ಮ ಅಧಿಕಾರಾವಧಿಯಲ್ಲಿ ಸಾವಿರಾರು ಕಿಲೋಮೀಟರ್‌ಗಳಷ್ಟು ರೈಲು ಚಾಲನೆ ಮಾಡಿ ಲಕ್ಷಾಂತರ ಪ್ರಯಾಣಿಕರನ್ನು ಸುರಕ್ಷಿತವಾಗಿ ತಲುಪಿಸಿದ ಹೆಮ್ಮೆ ಹೊಂದಿದ್ದಾರೆ. ನಿವೃತ್ತಿಯ ನಂತರ ಹೊಸ ಮನೆ ನಿರ್ಮಿಸುವಾಗ, ತಮಗೆ ಆಸರೆಯಾಗಿದ್ದ ರೈಲನ್ನು ಸದಾ ಕಣ್ಣಮುಂದೆಯೇ ಇಟ್ಟುಕೊಳ್ಳಬೇಕೆಂಬ ಮಹದಾಸೆಯಿಂದ ಈ ವಿನೂತನ ಹೆಜ್ಜೆ ಇಟ್ಟಿದ್ದಾರೆ.

ತಮ್ಮ ವೃತ್ತಿಜೀವನದ ಸವಿನೆನಪಿಗಾಗಿ ರಾಮ್ ನಿವಾಸ್ ಅವರು ಟೆರೇಸ್ ಮೇಲೆ ನೈಜ ರೈಲನ್ನೇ ಹೋಲುವ ಶೈಲಿಯಲ್ಲಿ ರಚನೆ ಮಾಡಿದ್ದು, ಹಾದಿಹೋಕರು ಹಾಗೂ ಸಾರ್ವಜನಿಕರು ಆಶ್ಚರ್ಯಚಕಿತರಾಗಿ ವೀಕ್ಷಿಸುತ್ತಿದ್ದಾರೆ.

ದೂರದಿಂದ ನೋಡಿದರೆ ಮನೆಯ ಮೇಲೆಯೇ ನಿಜವಾದ ರೈಲು ನಿಂತಿದೆಯೇನೋ ಎಂಬ ಭಾಸ ಉಂಟುಮಾಡುವ ಈ ವಿಶಿಷ್ಟ ರಚನೆ, ಸದ್ಯ ಆ ಭಾಗದ ಪ್ರಮುಖ ಆಕರ್ಷಣೆಯಾಗಿ ಹೊರಹೊಮ್ಮಿದೆ. ಇದಕ್ಕೆ ಸಂಬಂಧಿಸಿದ ಫೋಟೋ ಹಾಗೂ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ರಾಮ್ ನಿವಾಸ್ ಅವರ ಅಪಾರ ವೃತ್ತಿಪ್ರೇಮ ಮತ್ತು ಸೃಜನಶೀಲತೆಗೆ ಸಾರ್ವಜನಿಕರು ಹಾಗೂ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ವರದಿ :- ಗಿಲ್ಬರ್ಟ್. ಜೆ


Share News