ಬೆಂಗಳೂರು: ಕರ್ನಾಟಕ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯೊಂದಿಗೆ ಮಹತ್ವದ ಪ್ರಗತಿ ಪರಿಶೀಲನಾ ಸಭೆ ನಡೆದಿದ್ದು, ರಾಜ್ಯದಲ್ಲಿ ವಿಪತ್ತು ನಿರ್ವಹಣೆ, ಅಗ್ನಿಶಾಮಕ ಹಾಗೂ ರಕ್ಷಣಾ ಕಾರ್ಯಗಳನ್ನು ಮತ್ತಷ್ಟು ಸಬಲಗೊಳಿಸಲು ಹಲವು ಪ್ರಮುಖ ನಿರ್ದೇಶನಗಳನ್ನು ನೀಡಲಾಗಿದೆ.
ಇಲಾಖೆಯ ಪ್ರಗತಿ ಪರಿಶೀಲನೆ: ರಾಜ್ಯದಲ್ಲಿರುವ ಒಟ್ಟು 219 ಅಗ್ನಿಶಾಮಕ ಠಾಣೆಗಳ ಪ್ರಸ್ತುತ ಕಾರ್ಯನಿರ್ವಹಣೆಯ ಸ್ಥಿತಿಗತಿಯನ್ನು ಪರಿಶೀಲಿಸಿ, ಶೀಘ್ರದಲ್ಲೇ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.
490 ಹುದ್ದೆಗಳ ಭರ್ತಿಗೆ ಸೂಚನೆ: ಖಾಲಿ ಇರುವ 490 ಹುದ್ದೆಗಳ ಭರ್ತಿ ಪ್ರಕ್ರಿಯೆಯನ್ನು ಆರ್ಥಿಕ ಇಲಾಖೆಯ ಸಮನ್ವಯದೊಂದಿಗೆ ತ್ವರಿತಗೊಳಿಸಲು ಹಾಗೂ 371(ಜೆ) ಅಡಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ನೇಮಕಾತಿಗೆ ಅಗತ್ಯ ಕ್ರಮ ಕೈಗೊಳ್ಳಲು ನಿರ್ದೇಶಿಸಲಾಗಿದೆ.
ಸ್ವಂತ ಕಟ್ಟಡಗಳ ನಿರ್ಮಾಣ: ಹುಬ್ಬಳ್ಳಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬಾಡಿಗೆ ಅಥವಾ ಇತರೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಠಾಣೆಗಳ ಮಾಹಿತಿ ಪಡೆದು, ಸ್ವಂತ ಅಗ್ನಿಶಾಮಕ ಠಾಣೆಗಳ ನಿರ್ಮಾಣಕ್ಕೆ ಕ್ರಮ ವಹಿಸಲು ತಿಳಿಸಲಾಗಿದೆ.
ವಸತಿ ಸೌಲಭ್ಯ ಹೆಚ್ಚಳ: ಸಿಬ್ಬಂದಿಗೆ ಅಗತ್ಯವಿರುವ ವಸತಿ ನಿವಾಸ ಸೌಲಭ್ಯಗಳನ್ನು ಶೇ. 50ರಷ್ಟು ಹೆಚ್ಚಿಸುವ ಕುರಿತು ಪ್ರಸ್ತಾವನೆ ಸಲ್ಲಿಸಲು ಸೂಚಿಸಲಾಗಿದೆ.
SDRF & ಗೃಹರಕ್ಷಕ ದಳ ಬಲವರ್ಧನೆ: ವಿಪತ್ತು ಸಂದರ್ಭಗಳಲ್ಲಿ ತ್ವರಿತ ಸ್ಪಂದನೆಗಾಗಿ SDRF ಸಾಮರ್ಥ್ಯ ಹೆಚ್ಚಿಸುವುದು ಹಾಗೂ ಗೃಹರಕ್ಷಕ ದಳವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಶಿಕ್ಷಣ ಸಂಸ್ಥೆಗಳ ಸಹಭಾಗಿತ್ವದಲ್ಲಿ ತರಬೇತಿ ಮತ್ತು ಜಾಗೃತಿ ಕಾರ್ಯಕ್ರಮ ವಿಸ್ತರಿಸಲು ತೀರ್ಮಾನಿಸಲಾಗಿದೆ.
ರಾಜ್ಯದ ಪ್ರತಿಯೊಬ್ಬ ನಾಗರಿಕರ ಜೀವ ಮತ್ತು ಆಸ್ತಿಯ ರಕ್ಷಣೆ ಸರ್ಕಾರದ ಆದ್ಯತೆಯಾಗಿದ್ದು, ಅಗ್ನಿಶಾಮಕ, ವಿಪತ್ತು ನಿರ್ವಹಣೆ ಹಾಗೂ ಗೃಹರಕ್ಷಕ ದಳಗಳನ್ನು ಆಧುನಿಕ ಮತ್ತು ಜನಸ್ನೇಹಿಯಾಗಿಸಲು ಸರ್ಕಾರ ಬದ್ಧವಾಗಿದೆ ಎಂದು ಗೃಹಮಂತ್ರಿಗಳು ತಿಳಿಸಿದರು.
