ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರೇವ್ ಪಾರ್ಟಿ ಸಂಸ್ಕೃತಿಗೆ ತಡೆಹಾಕಲು ಪೊಲೀಸರು ಎಷ್ಟೇ ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ, ಕಿಡಿಗೇಡಿಗಳು ಹೊಸ ಹೊಸ ಹಾದಿಗಳನ್ನು ಕಂಡುಕೊಳ್ಳುತ್ತಿದ್ದಾರೆ. ನಗರದ ಅತ್ಯಂತ ಪ್ರತಿಷ್ಠಿತ ಪ್ರದೇಶ ಎನಿಸಿಕೊಂಡಿರುವ ಎಚ್ಎಸ್ಆರ್ ಲೇಔಟ್ 6ನೇ ಸೆಕ್ಟರ್ನ ಐಪಿಎಸ್ ಬಡಾವಣೆಯಲ್ಲಿ ನಡೆಯುತ್ತಿದ್ದ ಅಕ್ರಮ ರೇವ್ ಪಾರ್ಟಿ ಮೇಲೆ ಮಹಿಳಾ ಘಟಕದ ಪೊಲೀಸರು ಮಿಂಚಿನ ದಾಳಿ ನಡೆಸಿ, ಕೃತ್ಯವನ್ನು ಬಯಲಿಗೆಳೆದಿದ್ದಾರೆ.
ಐಪಿಎಸ್ ಬಡಾವಣೆಯಲ್ಲಿರುವ ಸಿ-9 ವಿಲ್ಲಾವನ್ನು ‘ರೇವ್ ಕೀ ಹಾಸ್ಪಿಟಾಲಿಟಿ ಸರ್ವಿಸ್’ ಹೆಸರಿನಲ್ಲಿ ಬರೋಬ್ಬರಿ ₹20,000 ಬಾಡಿಗೆ ನೀಡಿ ರೇವ್ ಪಾರ್ಟಿಗಾಗಿಯೇ ಬುಕ್ ಮಾಡಲಾಗಿತ್ತು. ಸಾರ್ವಜನಿಕರಿಗೆ ಅನುಮಾನ ಬಾರದಂತೆ ‘ಅಮಿಗೋಸ್’ (Amigos) ಎಂಬ ಆಪ್ ಮೂಲಕ ಯುವಕ-ಯುವತಿಯರಿಗೆ ರಹಸ್ಯವಾಗಿ ಆಹ್ವಾನ ನೀಡಲಾಗಿತ್ತು. ಪಾರ್ಟಿಯ ಪ್ರವೇಶ ಶುಲ್ಕವಾಗಿ ಯುವಕರಿಗೆ ₹1,099 ಹಾಗೂ ಯುವತಿಯರಿಗೆ ₹499 ನಿಗದಿಪಡಿಸಿ ವಸೂಲಿ ಮಾಡಲಾಗಿತ್ತು.
ವಿಲ್ಲಾದೊಳಗೆ ಅಕ್ರಮವಾಗಿ ಮದ್ಯದ ಹೊಳೆಯೇ ಹರಿಯುತ್ತಿತ್ತು. ಅಷ್ಟೇ ಅಲ್ಲದೆ, ರಾಜ್ಯ ಸರ್ಕಾರ ನಿಷೇಧಿಸಿರುವ ಹುಕ್ಕಾ ಹಾಗೂ ಅಪಾಯಕಾರಿ ‘ಇ-ಸಿಗರೇಟ್’ಗಳನ್ನು ಇಟ್ಟುಕೊಂಡು ಯುವಕ-ಯುವತಿಯರು ಇಡೀ ರಾತ್ರಿ ಕಂಟ್ರಿ ಮ್ಯೂಸಿಕ್, ಡ್ಯಾನ್ಸ್ ಹಾಗೂ ನಿಷೇಧಿತ ವಸ್ತುಗಳ ಅಮಲಿನಲ್ಲಿ ತೇಲಾಡುತ್ತಿದ್ದರು.
ಖಚಿತ ಮಾಹಿತಿ ಆಧರಿಸಿ ತಕ್ಷಣವೇ ಕಾರ್ಯಪ್ರವೃತ್ತರಾದ ಮಹಿಳಾ ಘಟಕದ ಪೊಲೀಸರು ಸಿ-9 ವಿಲ್ಲಾ ಮೇಲೆ ದಿಢೀರ್ ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಪಾರ್ಟಿಯಲ್ಲಿದ್ದ ಹಲವು ಯುವತಿಯರನ್ನು ಪೊಲೀಸರು ರಕ್ಷಿಸಿದ್ದು, ಸ್ಥಳದಲ್ಲಿದ್ದ ನಿಷೇಧಿತ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಶಾಂತಿ-ಸುವ್ಯವಸ್ಥೆಗೆ ಹೆಸರುವಾಸಿಯಾಗಿದ್ದ ಐಪಿಎಸ್ ಬಡಾವಣೆಯಲ್ಲೇ ಇಂತಹ ಅನೈತಿಕ ಹಾಗೂ ಅಕ್ರಮ ರೇವ್ ಪಾರ್ಟಿ ನಡೆದಿರುವುದು ಸ್ಥಳೀಯ ನಿವಾಸಿಗಳಲ್ಲಿ ತೀವ್ರ ಆತಂಕ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.