Share News

ಬೀದರ್: ಬೀದರ್ ಜಿಲ್ಲಾ ಪೊಲೀಸ್ ಹಾಗೂ ಭಾಲ್ಕಿ ಉಪವಿಭಾಗದ ಪೊಲೀಸರು ಜಂಟಿಯಾಗಿ ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ, ವಿವಿಧ ಶಾಲೆಗಳ ಅಡುಗೆ ಕೋಣೆಗಳಿಂದ ಕಳವಾಗಿದ್ದ 55 ಗ್ಯಾಸ್ ಸಿಲಿಂಡರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೃತ್ಯಕ್ಕೆ ಬಳಸಿದ್ದ ಕಾರು ಸೇರಿದಂತೆ ಒಟ್ಟು ₹9.75 ಲಕ್ಷ ಮೌಲ್ಯದೊತ್ತುಗಳನ್ನು ಜಪ್ತಿ ಮಾಡಲಾಗಿದ್ದು, ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ.

​ಕಾರ್ಯಾಚರಣೆಯ ವಿವರ:

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಪ್ರದೀಪ್ ಗುಂಟಿ, ಐ.ಪಿ.ಎಸ್. ಅವರ ನೇರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಚಂದ್ರಕಾಂತ ಪೂಜಾರಿ ಅವರ ಮುಂದಾಳತ್ವ ಹಾಗೂ ಭಾಲ್ಕಿ ಡಿಎಸ್ಪಿ ಬಲ್ಲಪ್ಪ ನಂದಗಾಂವಿ ಅವರ ನೇತೃತ್ವದಲ್ಲಿ ಭಾಲ್ಕಿ ಗ್ರಾಮೀಣ, ಮೇಹಕರ ಹಾಗೂ ಖಟಕ ಚಿಂಚೋಳಿ ಪೊಲೀಸ್ ಠಾಣೆಗಳ ಜಂಟಿ ತಂಡ ಈ ಕಾರ್ಯಚರಣೆ ನಡೆಸಿದೆ.

​ಕಳವು ಮಾಡಿದ್ದ ಗ್ಯಾಸ್ ಸಿಲಿಂಡರ್‌ಗಳನ್ನು ಮಹಾರಾಷ್ಟ್ರದ ಉದಗೀರ ಕಡೆಗೆ ಕಾರಿನಲ್ಲಿ ಸಾಗಿಸುತ್ತಿದ್ದಾಗ ದೊರೆತ ಖಚಿತ ಮಾಹಿತಿ ಆಧರಿಸಿ, ಬೀದರ–ಉದಗೀರ ರಸ್ತೆಯ ಬೀರಿ (ಬಿ) ಕ್ರಾಸ್ ಸಮೀಪ ಆರೋಪಿಗಳನ್ನು ವಶಕ್ಕೆ ಪಡೆಯಲಾಯಿತು. ವಿಚಾರಣೆ ವೇಳೆ ದಾಡಗಿ ಕ್ರಾಸ್ ಸಮೀಪದ ಹೋಟೆಲ್‌ನಲ್ಲಿ ಸಿಲಿಂಡರ್‌ಗಳನ್ನು ಸಂಗ್ರಹಿಸಿಟ್ಟಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದು, ತಕ್ಷಣ ದಾಳಿ ನಡೆಸಿದ ಪೊಲೀಸರು ₹2.75 ಲಕ್ಷ ಮೌಲ್ಯದ 55 ಸಿಲಿಂಡರ್‌ಗಳು ಹಾಗೂ ₹7 ಲಕ್ಷ ಮೌಲ್ಯದ ಕಾರನ್ನು ಜಪ್ತಿ ಮಾಡಿದ್ದಾರೆ.

​ತನಿಖಾ ತಂಡಕ್ಕೆ ಶ್ಲಾಘನೆ:

ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಭಾಲ್ಕಿ ಗ್ರಾಮೀಣ ವೃತ್ತದ ಸಿಪಿಐ ಹನುಮರೆಡ್ಡಪ್ಪ, ಪಿಎಸ್‌ಐ ಅಶೋಕ ಪಾಟೀಲ್ ಹಾಗೂ ಪೊಲೀಸ್ ಸಿಬ್ಬಂದಿಗಳ ಕಾರ್ಯವೈಖರಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

​ಪೊಲೀಸ್ ಇಲಾಖೆಯ ಎಚ್ಚರಿಕೆ:

“ಬೀದರ್ ಜಿಲ್ಲೆಯಲ್ಲಿ ಅಪರಾಧ ನಿಯಂತ್ರಣ ಹಾಗೂ ಕಳವು ಪ್ರಕರಣಗಳ ಪತ್ತೆ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಲಾಗಿದೆ. ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗುವವರ ವಿರುದ್ಧ ಇಲಾಖೆಯು ಕಠಿಣ ಕ್ರಮ ಮುಂದುವರಿಸಲಿದೆ.”

– ಜಿಲ್ಲಾ ಪೊಲೀಸ್ ಕಾರ್ಯಾಲಯ, ಬೀದರ್.


Share News