Share News

ಚಿತ್ರದುರ್ಗ: ವಿದ್ಯುತ್ ಸ್ಪರ್ಶಿಸಿ ನವಿಲು ಸಾವನ್ನಪ್ಪಿದ್ದು, ಆ ನವಿಲನ್ನು ತಿನ್ನಲು ಯತ್ನಿಸಿದ ಚಿರತೆಯೂ ಸಹ ವಿದ್ಯುತ್ ತಂತಿ ತಾಗಿ ದುರಂತವಾಗಿ ಮೃತಪಟ್ಟ ಭೀಕರ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಕಬ್ಬಿನಕೆರೆ ಗ್ರಾಮದಲ್ಲಿ ಸಂಭವಿಸಿದೆ.

​ಕಬ್ಬಿನಕೆರೆ ಗ್ರಾಮದ ಕುಡಿಯುವ ನೀರಿನ ಪಂಪ್‌ಸೆಟ್‌ಗೆ ಅಳವಡಿಸಲಾಗಿದ್ದ ವಿದ್ಯುತ್ ಪರಿವರ್ತಕದ (ಟ್ರಾನ್ಸ್‌ಫಾರ್ಮರ್) ಬಳಿ ಈ ಘಟನೆ ನಡೆದಿದೆ.

​ಘಟನೆಯ ವಿವರ:

ಮೊದಲು ನವಿಲೊಂದು ವಿದ್ಯುತ್ ಸ್ಪರ್ಶಿಸಿ ಟ್ರಾನ್ಸ್‌ಫಾರ್ಮರ್ ಮೇಲೆಯೇ ಅಸುನೀಗಿತ್ತು. ಇದನ್ನು ಗಮನಿಸಿದ ಚಿರತೆಯು ನವಿಲನ್ನು ಭೇಟೆಯಾಡಿ ತಿನ್ನುವ ದುರಾಶೆಯಿಂದ ಟ್ರಾನ್ಸ್‌ಫಾರ್ಮರ್ ಮೇಲೇರಿದೆ. ಈ ವೇಳೆ ಚಿರತೆಗೂ ತೀವ್ರ ಪ್ರಮಾಣದ ವಿದ್ಯುತ್ ಪ್ರವಹಿಸಿ, ಅದು ಸಹ ಟ್ರಾನ್ಸ್‌ಫಾರ್ಮರ್ ಮೇಲೆಯೇ ಸಾವನ್ನಪ್ಪಿದೆ.

​ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಟ್ರಾನ್ಸ್‌ಫಾರ್ಮರ್ ಮೇಲಿದ್ದ ನವಿಲು ಹಾಗೂ ಚಿರತೆಯ ಮೃತದೇಹಗಳನ್ನು ಕೆಳಗಿಳಿಸಿ ತೆರವುಗೊಳಿಸುವ ಕಾರ್ಯಾಚರಣೆ ನಡೆಸಿದರು.

​ಈ ಸಂಬಂಧ ಹೊಸದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.


Share News