Share News

ಬೆಂಗಳೂರು: ರಾಜ್ಯದ ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳು ಹಾಗೂ ಪವರ್ ಬ್ಯಾಕಪ್ (ಯುಪಿಎಸ್) ವ್ಯವಸ್ಥೆಗಳು ಸಮರ್ಪಕವಾಗಿ ಕಾರ್ಯನಿರ್ವಹಿಸದಿರುವ ಬಗ್ಗೆ ಕರ್ನಾಟಕ ಹೈಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಮಹತ್ವದ ಆದೇಶ ನೀಡಿದೆ.

​ಬೆಂಗಳೂರಿನ ವೈಟ್‌ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠವು ಈ ನಿರ್ದೇಶನ ನೀಡಿದೆ. ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರು (DG & IGP) ವೈಯಕ್ತಿಕವಾಗಿ ಈ ವಿಚಾರವನ್ನು ಪರಿಶೀಲಿಸಿ ವರದಿ ನೀಡಬೇಕೆಂದು ನ್ಯಾಯಾಲಯ ಸೂಚಿಸಿದೆ.

​ವರದಿಯಲ್ಲಿದೆ ಆತಂಕಕಾರಿ ವೈಪರೀತ್ಯ:

ವಿವಿಧ ಠಾಣೆಗಳ ಸಿಸಿಟಿವಿ ಹಾಗೂ ಯುಪಿಎಸ್ ಸ್ಥಿತಿಗತಿಯ ಕುರಿತು ಸಲ್ಲಿಸಲಾದ ವರದಿಯಲ್ಲಿ ತೀವ್ರ ಲೋಪದೋಷಗಳು ಕಂಡುಬಂದಿವೆ:

​ಸತ್ಯ ಮರೆಮಾಚುವ ಯತ್ನ: ಯುಪಿಎಸ್‌ಗಳು ‘ಕಾರ್ಯನಿರ್ವಹಿಸುತ್ತಿಲ್ಲ’ ಎಂದು ನಮೂದಿಸುವ ಬದಲು ‘ನಿಲ್’ (NIL) ಎಂದು ನಮೂದಿಸಿ, ಸಿಸಿಟಿವಿಗಳು 24 ಗಂಟೆಯೂ ನಿರಂತರವಾಗಿ ಚಾಲನೆಯಲ್ಲಿವೆ ಎಂಬಂತೆ ತಪ್ಪುದಾರಿಗೆಳೆಯುವ ಯತ್ನ ನಡೆದಿದೆ.

​ಸಾಮರ್ಥ್ಯದಲ್ಲಿ ಭಾರಿ ವ್ಯತ್ಯಾಸ: ಹೆಚ್ಚಿನ ಠಾಣೆಗಳಲ್ಲಿ ಸರಾಸರಿ 4 ಸಿಸಿಟಿವಿ ಕ್ಯಾಮೆರಾಗಳಿದ್ದರೂ, ಕೆಲವೆಡೆ ಕೇವಲ 0.5 ಕೆವಿಎ ಅಥವಾ 1 ಕೆವಿಎ ಸಾಮರ್ಥ್ಯದ ಯುಪಿಎಸ್ ಇದ್ದರೆ, ಇನ್ನು ಕೆಲವು ಕಡೆ 600 ಕೆವಿಎವರೆಗಿನ ಅಸಹಜ ಸಾಮರ್ಥ್ಯದ ಯುಪಿಎಸ್ ನಮೂದಿಸಲಾಗಿದೆ.

​ವಿದ್ಯುತ್ ಕಡಿತಗೊಂಡಾಗ ಸಿಸಿಟಿವಿ ವ್ಯವಸ್ಥೆ ನಿರಂತರವಾಗಿ ಕಾರ್ಯನಿರ್ವಹಿಸಲು ಈ ಯುಪಿಎಸ್‌ಗಳು ಶಕ್ತವಾಗಿವೆಯೇ ಎಂಬುದರ ಬಗ್ಗೆ ಯಾವುದೇ ಸ್ಪಷ್ಟತೆಯಿಲ್ಲ ಎಂದು ಕಳವಳ ವ್ಯಕ್ತಪಡಿಸಿರುವ ಹೈಕೋರ್ಟ್, ಈ ಅಸಂಗತತೆಗಳ ಕುರಿತು ಕಟ್ಟುನಿಟ್ಟಿನ ವಿಚಾರಣೆ ನಡೆಸಲು ಆದೇಶಿಸಿದೆ.


Share News