ಹಾಸನ: ನಗರದ ಚನ್ನಪಟ್ಟಣ ಸರ್ಕಲ್ ಬಳಿ ಹಾಡಹಗಲೇ ವ್ಯಕ್ತಿಯೊಬ್ಬರ ತಲೆ ಮೇಲೆ ಭಾರಿ ಗಾತ್ರದ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆ ಮಾಡಿರುವ ಭೀಕರ ಘಟನೆ ನಡೆದಿದೆ.
ಹಾಸನ ತಾಲೂಕಿನ ಹರಳಹಳ್ಳಿ ಗ್ರಾಮದ ನಿವಾಸಿ ಮಣಿ ಅಲಿಯಾಸ್ ಮಣಿಕಂಠ (35) ಕೊಲೆಯಾದ ದುರದೃಷ್ಟಕರ ವ್ಯಕ್ತಿ. ಮಣಿಕಂಠ ನಗರದ 80 ಅಡಿ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್ನಲ್ಲಿ ಉದ್ಯೋಗಿಯಾಗಿದ್ದರು.
ಗೃಹಪ್ರವೇಶದ ದಿನವೇ ಘಟಿಸಿದ ದುರಂತ:
ಮಧ್ಯಾಹ್ನ 2 ಗಂಟೆಗೆ ಮಣಿಕಂಠ ಅವರ ಹೊಸ ಮನೆಯ ಗೃಹಪ್ರವೇಶ ಕಾರ್ಯಕ್ರಮ ನಿಗದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಪೆಟ್ರೋಲ್ ಬಂಕ್ನಿಂದ ಕೆಲಸ ಮುಗಿಸಿ ಹೊರಟಿದ್ದ ಅವರು, ಬೈಕ್ನಲ್ಲಿ ಎಪಿಎಂಸಿ ವರೆಗೆ ಲಿಫ್ಟ್ ಪಡೆದು ಬಂದಿದ್ದರು ಎನ್ನಲಾಗಿದೆ. ಅಲ್ಲಿಂದ ಚನ್ನಪಟ್ಟಣ ಸರ್ಕಲ್ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಅಂಚಿನಲ್ಲಿ ಸಂಚು ರೂಪಿಸಿದ್ದ ದುಷ್ಕರ್ಮಿಗಳು ದಿಢೀರ್ ದಾಳಿ ನಡೆಸಿ, ತಲೆಗೆ ಕಲ್ಲು ಎತ್ತಿಹಾಕಿ ಭೀಕರವಾಗಿ ಹತ್ಯೆ ಮಾಡಿದ್ದಾರೆ.
ಪೊಲೀಸರ ಪರಿಶೀಲನೆ ಹಾಗೂ ತನಿಖೆ:
ಜನನಿಬಿಡ ಪ್ರದೇಶದಲ್ಲಿ ಹಾಡಹಗಲೇ ನಡೆದ ಈ ಕೊಲೆಯಿಂದ ಸ್ಥಳದಲ್ಲಿ ಕೆಲಕಾಲ ತೀವ್ರ ಆತಂಕ ಹಾಗೂ ಭಯದ ವಾತಾವರಣ ಸೃಷ್ಟಿಯಾಗಿತ್ತು. ಘಟನೆಯ ಮಾಹಿತಿ ಲಭಿಸುತ್ತಿದ್ದಂತೆ ಹಾಸನ ಎಸ್ಪಿ ಶುಭಾನ್ವಿತ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆರಳಚ್ಚು ತಜ್ಞರು ಹಾಗೂ ಸೋಕೋ (SOCO) ತಂಡ ಸ್ಥಳೀಯ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದೆ. ಘಟನೆಗೆ ಸಂಬಂಧಿಸಿದಂತೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆಗಾರರ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.