ಚಾಮರಾಜನಗರ: ಸಾರ್ವಜನಿಕರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿದ್ದ ಹೋಟೆಲ್ ಹಾಗೂ ರೆಸ್ಟೋರೆಂಟ್ಗಳ ಮೇಲೆ ಚಾಮರಾಜನಗರ ಜಿಲ್ಲಾಧಿಕಾರಿ ಶ್ರೀರೂಪಾ ಅವರು ದಿಢೀರ್ ಪರಿಶೀಲನೆ ನಡೆಸಿ, ನಿಯಮ ಉಲ್ಲಂಘಿಸಿದ ಎರಡು ಪ್ರಮುಖ ಹೋಟೆಲ್ಗಳಿಗೆ ಬೀಗ ಜಡಿದಿದ್ದಾರೆ.
ಅವಧಿ ಮೀರಿದ ಹಾಗೂ ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳನ್ನು ಬಳಸಲಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.
ಅಧಿಕಾರಿಗಳ ತಪಾಸಣೆ ವೇಳೆ ಕಂಡುಬಂದ ಲೋಪಗಳು:
ಉಡುಪಿ ಗ್ರ್ಯಾಂಡ್ ಹೋಟೆಲ್: ಅಡುಗೆಮನೆಯಲ್ಲಿ ಸ್ವಚ್ಛತೆಯ ತೀವ್ರ ಕೊರತೆ, ಆಹಾರಕ್ಕೆ ಕೃತಕ ಬಣ್ಣಗಳ ಬಳಕೆ ಹಾಗೂ ಅವಧಿ ಮೀರಿದ ಆಹಾರ ಪದಾರ್ಥಗಳನ್ನು ಬಳಸಿ ಅಡುಗೆ ಮಾಡುತ್ತಿರುವುದು ಪತ್ತೆಯಾಗಿದೆ.
ಮಕಾವ್ ಹೋಟೆಲ್: ಗ್ರಾಹಕರಿಗೆ ಸರಬರಾಜು ಮಾಡಲು ಇಟ್ಟಿದ್ದ ತಾಜಾತನವಿಲ್ಲದ, ಹಳೆಯ ಮಾಂಸ ಹಾಗೂ ಮಶ್ರೂಮ್ಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಈ ಗಂಭೀರ ಲೋಪಗಳ ಹಿನ್ನೆಲೆಯಲ್ಲಿ ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಎರಡೂ ಹೋಟೆಲ್ಗಳನ್ನು ತಾತ್ಕಾಲಿಕವಾಗಿ ಮುಚ್ಚುವಂತೆ ಜಿಲ್ಲಾಡಳಿತ ಆದೇಶಿಸಿದೆ.
ಇದೇ ವೇಳೆ ಕೈಗಾರಿಕಾ ಪ್ರದೇಶದಲ್ಲಿರುವ ಕೇನ್ಸ್ ಮತ್ತು ಕಲರ್ ಟೋನ್ ಉದ್ಯಮ ಸಂಸ್ಥೆಗಳು ಹಾಗೂ ರಸ್ತೆಬದಿಯ ಬೇಕರಿಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಆಹಾರದ ಗುಣಮಟ್ಟ ಮತ್ತು ಸ್ವಚ್ಛತೆಯನ್ನು ಪರಿಶೀಲಿಸಿದರು. ಆಹಾರದ ಶುಚಿತ್ವ ಮತ್ತು ಗುಣಮಟ್ಟದ ವಿಷಯದಲ್ಲಿ ಯಾವುದೇ ಕಾರಣಕ್ಕೂ ರಾಜಿ ಇಲ್ಲ ಎಂದು ಈ ಕಾರ್ಯಾಚರಣೆಯ ಮೂಲಕ ಜಿಲ್ಲಾಡಳಿತ ಖಡಕ್ ಎಚ್ಚರಿಕೆ ನೀಡಿದೆ.
