ಶಿವಮೊಗ್ಗ: ನಗರದಲ್ಲಿ ನಡೆದಿದ್ದ ರೌಡಿಶೀಟರ್ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿದ್ದು, ಬಂಧನ ವೇಳೆ ಹಲ್ಲೆಗೆ ಯತ್ನಿಸಿದ ಪ್ರಮುಖ ಆರೋಪಿಯ ಕಾಲಿಗೆ ಗುಂಡು ಹಾರಿಸಿ (Police Firing) ವಶಕ್ಕೆ ಪಡೆದಿದ್ದಾರೆ.
ಘಟನೆಯ ಹಿನ್ನೆಲೆ:
ಶಿವಮೊಗ್ಗ ನಗರದ ಸಿಗೇಹಟ್ಟಿ-ಭಾರತಿ ಕಾಲೋನಿ ನಿವಾಸಿಯಾಗಿದ್ದ ರೌಡಿಶೀಟರ್ ಕಿರಣ್ ಅಲಿಯಾಸ್ ಕುಳ್ಳಿ ಕಿರಣ್ (32) ಎಂಬಾತನನ್ನು ಶಿವಮೊಗ್ಗ ತಾಲೂಕಿನ ರಾಮಿನಕೊಪ್ಪ ಬಳಿ ಆತನ ಸ್ನೇಹಿತರ ಜೊತೆ ಇದ್ದಾಗ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಇರಿದು ಭೀಕರವಾಗಿ ಹತ್ಯೆ ಮಾಡಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಕಿರಣ್ ಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲೇ ಕೊನೆಯುಸಿರೆಳೆದಿದ್ದ.
ಬೆಳ್ಳಂಬೆಳಿಗ್ಗೆ ನಡೆದ ಫೈರಿಂಗ್ ಕಾರ್ಯಾಚರಣೆ:
ಕೊಲೆ ಪ್ರಕರಣದ ಪ್ರಮುಖ ಆರೋಪಿ ಹೊಸಕೊಪ್ಪ ಉಮೇಶ್ ನಾಯ್ಕ್ ಎನ್.ಆರ್.ಪುರ ರಸ್ತೆಯ ಲಿಂಗಾಪುರ ಬಳಿ ಇರುವ ಬಗ್ಗೆ ಮಾಹಿತಿ ತಿಳಿದ ತುಂಗಾನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಗುರುರಾಜ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಗೆ ತೆರಳಿದ್ದರು.
ಪೊಲೀಸರ ಮೇಲೆ ಹಲ್ಲೆ: ಆರೋಪಿಯನ್ನು ಬಂಧಿಸಲು ತೆರಳಿದಾಗ ಉಮೇಶ್ ನಾಯ್ಕ್ ಬ್ಲೇಡ್ ಚೈನ್‌ನಿಂದ ಪೊಲೀಸ್ ಸಿಬ್ಬಂದಿ ತಮ್ಮಣ್ಣ ಅವರ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾನೆ.
ಆತ್ಮರಕ್ಷಣೆಗಾಗಿ ಫೈರಿಂಗ್: ತಕ್ಷಣವೇ ಶರಣಾಗುವಂತೆ ಎಚ್ಚರಿಕೆ ನೀಡಿದ ಇನ್ಸ್‌ಪೆಕ್ಟರ್ ಗುರುರಾಜ್ ಅವರು ಮೊದಲು ಗಾಳಿಯಲ್ಲಿ ಒಂದು ರೌಂಡ್ ಗುಂಡು ಹಾರಿಸಿದ್ದಾರೆ. ಆದರೂ ಆರೋಪಿ ಮಣಿಯದಿದ್ದಾಗ ಆತನ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ.
ಆಸ್ಪತ್ರೆಗೆ ಎಸ್ಪಿ ಭೇಟಿ:
ಗುಂಡೇಟಿನಿಂದ ಗಾಯಗೊಂಡಿರುವ ಪ್ರಮುಖ ಆರೋಪಿ ಉಮೇಶ್ ನಾಯ್ಕ್ ಹಾಗೂ ಗಾಯಗೊಂಡ ಪೊಲೀಸ್ ಸಿಬ್ಬಂದಿ ತಮ್ಮಣ್ಣ ಇಬ್ಬರನ್ನೂ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ತಿಳಿಯುತ್ತಿದ್ದಂತೆ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ನಿಖಿಲ್ ಬಿ. ಅವರು ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.