Share News

ಬೆಂಗಳೂರು: ರಾಜಧಾನಿಯ ಗಿರಿನಗರ, ಇಂದಿರಾನಗರ, ಚಿಕ್ಕಜಾಲ ಹಾಗೂ ಗೋವಿಂದಪುರ ಠಾಣೆಗಳ ಪೊಲೀಸರು ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ₹12.11 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದ್ದು, ಒಬ್ಬ ವಿದೇಶಿ ಹಾಗೂ ಒಬ್ಬ ಹೊರರಾಜ್ಯದ ಪ್ರಜೆ ಸೇರಿ ಒಟ್ಟು 7 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

​ವಶಪಡಿಸಿಕೊಂಡ ಮಾದಕ ವಸ್ತುಗಳ ಅಂತಾರಾಷ್ಟ್ರೀಯ ಮಾರುಕಟ್ಟೆ ಮೌಲ್ಯ ಸುಮಾರು ₹24.22 ಕೋಟಿ ಎಂದು ಅಂದಾಜಿಸಲಾಗಿದೆ.

​ಪ್ರಕರಣದ ಹಿನ್ನೆಲೆ ಹಾಗೂ ಕಾರ್ಯಾಚರಣೆ:

ನಗರದ ಗಿರಿನಗರ, ಇಂದಿರಾನಗರ, ಚಿಕ್ಕಜಾಲ ಹಾಗೂ ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧೆಡೆ ನಿಷೇಧಿತ ಮಾದಕ ವಸ್ತುಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ದೊರೆತಿತ್ತು. ಈ ಮಾಹಿತಿಯನ್ನಾಧಾರಿಸಿ ಎನ್‌ಡಿಪಿಎಸ್ (NDPS) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ದಾಳಿ ನಡೆಸಿದ ಪೊಲೀಸರು 7 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

​ವಿದ್ಯಾರ್ಥಿಗಳೇ ಟಾರ್ಗೆಟ್:

ಬಂಧಿತರನ್ನು ಸುದೀರ್ಘ ವಿಚಾರಣೆಗೊಳಪಡಿಸಿದಾಗ, ಸುಲಭವಾಗಿ ಹೆಚ್ಚಿನ ಹಣ ಗಳಿಸುವ ದುರಾಶೆಯಿಂದ ವಿದೇಶ ಹಾಗೂ ದೇಶದ ವಿವಿಧ ಭಾಗಗಳ ಅಪರಿಚಿತ ವ್ಯಕ್ತಿಗಳಿಂದ ಕಡಿಮೆ ಬೆಲೆಗೆ ಮಾದಕ ವಸ್ತುಗಳನ್ನು ತರಿಸಿಕೊಳ್ಳುತ್ತಿದ್ದರು. ಅದನ್ನು ಸಾರ್ವಜನಿಕರಿಗೆ ಹಾಗೂ ಮುಖ್ಯವಾಗಿ ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದುದಾಗಿ ಒಪ್ಪಿಕೊಂಡಿದ್ದಾರೆ.

​ಜಪ್ತಿಯಾದ ಸೊತ್ತುಗಳು:

​11 ಕೆಜಿ 237 ಗ್ರಾಂ ಎಂಡಿಎಂಎ (MDMA)

​2 ಕೆಜಿ 352 ಗ್ರಾಂ ಹೈಡ್ರೋ ಗಾಂಜಾ

​10 ಕೆಜಿ ಗಾಂಜಾ

​01 ಮೊಬೈಲ್ ಫೋನ್

​ನ್ಯಾಯಾಂಗ ಬಂಧನ:

ಬಂಧಿತ 7 ಮಂದಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮಾನ್ಯ ನ್ಯಾಯಾಲಯವು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ. ಇವರಿಗೆ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದ ಜಾಲದ ಪ್ರಮುಖ ಸೂತ್ರಧಾರರ ಪತ್ತೆಗೆ ಪೊಲೀಸರು ಶೋಧ ತೀವ್ರಗೊಳಿಸಿದ್ದಾರೆ.

​ಪೊಲೀಸ್ ತಂಡಕ್ಕೆ ಪ್ರಶಂಸೆ:

ದಕ್ಷಿಣ ವಿಭಾಗದ ಡಿಸಿಪಿ ಡಾ. ಕೆ. ವಂಶಿಕೃಷ್ಣ (IPS), ಪೂರ್ವ ವಿಭಾಗದ ಡಿಸಿಪಿ ಡಾ. ವಿಕ್ರಮ್ ಅಮಟೆ (IPS) ಹಾಗೂ ಈಶಾನ್ಯ ವಿಭಾಗದ ಡಿಸಿಪಿ ಶ್ರೀ ಜಿ.ಕೆ. ಮಿಥುನ್ ಕುಮಾರ್ (IPS) ಅವರ ಮಾರ್ಗದರ್ಶನದಲ್ಲಿ ವಿವಿಧ ಉಪವಿಭಾಗಗಳ ಎಸಿಪಿಗಳು ಹಾಗೂ ಗಿರಿನಗರ, ಇಂದಿರಾನಗರ, ಚಿಕ್ಕಜಾಲ, ಗೋವಿಂದಪುರ ಠಾಣೆಗಳ ಇನ್ಸ್‌ಪೆಕ್ಟರ್‌ಗಳ ನೇತೃತ್ವದ ಸಿಬ್ಬಂದಿ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ.


Share News