Share News

ಕಳಸದಲ್ಲಿ ನಿರಂತರ ಸರ್ವರ್‌ ಸಮಸ್ಯೆ | ಶಾಲೆಗೆ ರಜೆ ಹಾಕಿಸಿ ಬಂದ ಮಕ್ಕಳು, ಹೈರಾಣಾದ ವೃದ್ಧರು

​ಕಳಸ (ಚಿಕ್ಕಮಗಳೂರು): ಪಡಿತರ ಚೀಟಿಯ e-KYC (ಇ-ಕೆವೈಸಿ) ನವೀಕರಣ ಪ್ರಕ್ರಿಯೆ ಗ್ರಾಮೀಣ ಭಾಗದ ಬಡ ಜನರಿಗೆ ಶಾಪವಾಗಿ ಪರಿಣಮಿಸಿದ್ದು, ತಾಲ್ಲೂಕಿನಲ್ಲಿ ಸಾರ್ವಜನಿಕರು ಕೇಂದ್ರಗಳ ಮುಂದೆ ದಿನಪೂರ್ತಿ ಕಾಯುವ ನರಕಯಾತನೆ ಅನುಭವಿಸುತ್ತಿದ್ದಾರೆ.

​ತಾಲ್ಲೂಕಿನ ಬಲಿಗೆ, ಚಿಕ್ಕನಕೊಡುಗೆ, ತುರ, ಹೊನ್ನೆಕಾಡು ಹಾಗೂ ಹೊರನಾಡು ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಿಂದ ದಿನನಿತ್ಯ ನೂರಾರು ಜನರು e-KYC ಮಾಡಿಸಿಕೊಳ್ಳಲು ಕಳಸದ ಕೇಂದ್ರಗಳಿಗೆ ಆಗಮಿಸುತ್ತಿದ್ದಾರೆ. ಆದರೆ, ಕಳೆದ ವಾರದಿಂದ ನಿರಂತರವಾಗಿ ಎದುರಾಗುತ್ತಿರುವ ಸರ್ವರ್‌ ತಾಂತ್ರಿಕ ಸಮಸ್ಯೆಯಿಂದಾಗಿ ಇಡೀ ದಿನ ಕಾದು, ಸಂಜೆಯ ವೇಳೆಗೆ ಕೆಲಸವಾಗದೆ ಬರಿಗೈಯಲ್ಲಿ ಮನೆಗೆ ವಾಪಸ್ಸಾಗುವಂತಾಗಿದೆ.

​ಕೂಲಿ ಇಲ್ಲ, ಪಾಠವೂ ಇಲ್ಲ!

e-KYC ಪೂರ್ಣಗೊಳ್ಳದಿದ್ದರೆ ಪಡಿತರ ಸಿಗುವುದಿಲ್ಲವೆಂಬ ಭೀತಿಯಿಂದ ಬಡ ಜನರು ತಮ್ಮ ದಿನಗೂಲಿ ಕೆಲಸಗಳನ್ನು ಬದಿಗೊತ್ತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಇನ್ನು ಕೆಲ ಪೋಷಕರು ತಮ್ಮ ಮಕ್ಕಳಿಗೆ ಶಾಲೆಗೆ ರಜೆ ಹಾಕಿಸಿ, ಬೆರಳಚ್ಚು (Biometric) ನೀಡಲು ಕೇಂದ್ರಗಳಿಗೆ ಕರೆತರುತ್ತಿದ್ದಾರೆ. ದಿನವಿಡೀ ಸಾಲಿನಲ್ಲಿ ನಿಲ್ಲಬೇಕಾದ ಸ್ಥಿತಿಯಿಂದಾಗಿ ವೃದ್ಧರು ಹಾಗೂ ಮಹಿಳೆಯರು ತೀವ್ರ ಅಸಹಾಯಕತೆಗೆ ಸಿಲುಕಿದ್ದಾರೆ.

​ಗ್ರಾಮಗಳಲ್ಲೇ ವಿಶೇಷ ಶಿಬಿರಕ್ಕೆ ಆಗ್ರಹ:

ಅಧಿಕಾರಿಗಳ ಮತ್ತು ತಾಂತ್ರಿಕ ವ್ಯವಸ್ಥೆಯ ಈ ಲೋಪದ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೂರದ ಹಳ್ಳಿಗಳಿಂದ ಬರುವ ಬಡಜನರ ಸಮಯ ಮತ್ತು ಹಣ ಪೋಲಾಗುವುದನ್ನು ತಪ್ಪಿಸಲು ಆಹಾರ ಇಲಾಖೆಯು ತಕ್ಷಣವೇ ಎಚ್ಚೆತ್ತುಕೊಂಡು, ಗ್ರಾಮ ಮಟ್ಟದಲ್ಲೇ ವಿಶೇಷ e-KYC ಶಿಬಿರಗಳನ್ನು ಆಯೋಜಿಸಬೇಕು ಹಾಗೂ ಸರ್ವರ್‌ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.


Share News