ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಶಾಲಾ ಮಕ್ಕಳ ಆಕ್ರೋಶ | ತಕ್ಷಣವೇ ನೀರಿನ ಸೌಕರ್ಯ ಕಲ್ಪಿಸಲು ಆಗ್ರಹ
ಹನೂರು (ಚಾಮರಾಜನಗರ): ಶಾಲೆಯಲ್ಲಿ ಬಿಸಿಯೂಟ ತಯಾರಿಸಲು ಕನಿಷ್ಠ ಕುಡಿಯುವ ನೀರೂ ಸಿಗದೆ ವಿದ್ಯಾರ್ಥಿಗಳು ಖಾಲಿ ಬಿಂದಿಗೆ ಹಾಗೂ ನೀರಿನ ಬಾಟಲಿಗಳನ್ನು ಹಿಡಿದು ಬೀದಿಗಿಳಿದು ಪ್ರತಿಭಟನೆ ನಡೆಸಿದ ಘಟನೆ ತಾಲೂಕಿನ ಸಂದನಪಾಳ್ಯ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸೆಂಟ್ ಆಂಥೋನಿ ಶಾಲೆಯಲ್ಲಿ ಈ ದುಸ್ಥಿತಿ ಎದುರಾಗಿದೆ. ಸರ್ಕಾರದಿಂದ ಬಿಸಿಯೂಟಕ್ಕೆ ಅಗತ್ಯವಿರುವ ಪಡಿತರ ಹಾಗೂ ಆಹಾರ ಧಾನ್ಯಗಳು ಸಮರ್ಪಕವಾಗಿ ಪೂರೈಕೆಯಾಗುತ್ತಿದ್ದರೂ, ಅಡುಗೆ ತಯಾರಿಸಲು ಮತ್ತು ಕುಡಿಯಲು ಅಗತ್ಯವಾದ ನೀರಿಲ್ಲದೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪರದಾಡುವಂತಾಗಿದೆ.
ಗ್ರಾಮ ಪಂಚಾಯಿತಿ ನಿರ್ಲಕ್ಷ್ಯ:
ಶಾಲೆಯಲ್ಲಿ ಎದುರಾಗಿರುವ ತೀವ್ರ ನೀರಿನ ಅಭಾವದ ಕುರಿತು ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ಹಲವು ಬಾರಿ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳ ಜಾಣಕುರುಡುತನದಿಂದ ರೋಸಿಹೋದ ವಿದ್ಯಾರ್ಥಿಗಳು ಕೊನೆಗೆ ಖಾಲಿ ಬಿಂದಿಗೆ ಹಾಗೂ ಖಾಲಿ ನೀರಿನ ಬಾಟಲಿಗಳನ್ನು ಕೈಯಲ್ಲಿ ಹಿಡಿದು ಪ್ರತಿಭಟನೆ ನಡೆಸುವ ಮೂಲಕ ಆಡಳಿತ ವ್ಯವಸ್ಥೆಯ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಸಂಬಂಧಪಟ್ಟ ಮೇಲಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಶಾಲೆಗೆ ಸಮರ್ಪಕ ಮತ್ತು ಖಾಯಂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಸ್ಥಳೀಯರು ಹಾಗೂ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.
Arakshakara Times Media
Related posts
