Share News

ಬೆಂಗಳೂರು: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ನಿವೃತ್ತ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ (PSI) ಅವರನ್ನು ಭೀಕರವಾಗಿ ಕೊಲೆ ಮಾಡಿದ್ದ ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ಒಟ್ಟು ₹2.20 ಲಕ್ಷ ದಂಡ ವಿಧಿಸಿ ಬೆಂಗಳೂರು ದಕ್ಷಿಣ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯ ಮಂಗಳಕರ ತೀರ್ಪು ನೀಡಿದೆ.

​ಶಂಕರ್‌ ಅಲಿಯಾಸ್ ಶಂಕರಯ್ಯ ಹಾಗೂ ನಟರಾಜು ಶಿಕ್ಷೆಗೆ ಗುರಿಯಾದ ಅಪರಾಧಿಗಳು.

​ಪ್ರಕರಣದ ಹಿನ್ನೆಲೆ:

2018ರಲ್ಲಿ ನಿವೃತ್ತ ಪಿಎಸ್‌ಐ ಸಿದ್ದರಿಂಗಯ್ಯ ಅವರೊಂದಿಗೆ ಆಸ್ತಿ ವಿಚಾರವಾಗಿ ತೀವ್ರ ದ್ವೇಷ ಹೊಂದಿದ್ದ ಆರೋಪಿಗಳು, ಅವರನ್ನು ಕೊಲೆ ಮಾಡಲು ಒಳಸಂಚು ರೂಪಿಸಿದ್ದರು. ಪಕ್ಕಾ ಸಂಚಿನಂತೆ ಸಿದ್ದರಿಂಗಯ್ಯ ಅವರನ್ನು ಹತ್ಯೆ ಮಾಡಲಾಗಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದರು.

​ಪೊಲೀಸ್ ತನಿಖೆಗೆ ಸಿಕ್ಕ ಜಯ:

ಚನ್ನಪಟ್ಟಣ ಗ್ರಾಮಾಂತರ ವೃತ್ತ ಹಾಗೂ ಎಂ.ಕೆ. ದೊಡ್ಡಿ ಪೊಲೀಸ್ ಠಾಣೆಯ ಅಧಿಕಾರಿಗಳು ಪ್ರಕರಣದ ತನಿಖೆಯನ್ನು ಅತ್ಯಂತ ಚಾಣಾಕ್ಷತನದಿಂದ ನಡೆಸಿ, ಸೂಕ್ತ ಸಾಕ್ಷ್ಯಾಧಾರಗಳನ್ನು ಕಲೆಹಾಕಿದ್ದರು. ಬೆಂಗಳೂರು ದಕ್ಷಿಣ ಜಿಲ್ಲಾ ಪೊಲೀಸ್ ವಿಭಾಗವು ನ್ಯಾಯಾಲಯದ ಪ್ರಕ್ರಿಯೆಯಲ್ಲಿ ಪ್ರಬಲ ಸಾಕ್ಷ್ಯಗಳು ಮತ್ತು ವಾದಗಳನ್ನು ಸಮರ್ಪಕವಾಗಿ ಮಂಡಿಸಿತ್ತು.

​ಪೊಲೀಸರು ಸಲ್ಲಿಸಿದ ತನಿಖಾ ವರದಿ ಹಾಗೂ ಸಾಕ್ಷ್ಯಾಧಾರಗಳನ್ನು ಪುರಸ್ಕರಿಸಿದ ಪ್ರಧಾನ ಸತ್ರ ನ್ಯಾಯಾಲಯವು ಆರೋಪಿಗಳ ಮೇಲಿನ ಕೃತ್ಯ ಸಾಬೀತಾದ ಹಿನ್ನೆಲೆಯಲ್ಲಿ ಇಬ್ಬರಿಗೂ ಜೀವಾವಧಿ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.

ವರದಿ : ಗಿಲ್ಬರ್ಟ್. ಜೆ 


Share News