Share News

ಬೆಂಗಳೂರು: ಎಗ್‌ರೈಸ್ ಖಾಲಿಯಾಗಿದೆ ಎಂದು ಅಂಗಡಿ ಮಾಲೀಕ ಹೇಳಿದ್ದಕ್ಕೆ ಆಕ್ರೋಶಗೊಂಡ ಯುವಕರ ಗುಂಪೊಂದು ಅಮಾಯಕರೊಬ್ಬರ ಮೇಲೆ ತಲ್ವಾರ್‌ನಿಂದ ಭೀಕರ ಹಲ್ಲೆ ನಡೆಸಿರುವ ಘಟನೆ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಬೇಗಿಹಳ್ಳಿಯಲ್ಲಿ ನಡೆದಿದೆ.

​ಘಟನೆಯ ವಿವರ:

ಕನಕರಾಜು ಎಂಬಾತ ತನ್ನ ಸ್ನೇಹಿತರೊಂದಿಗೆ ಆಟೋದಲ್ಲಿ ಎಗ್‌ರೈಸ್ ತಿನ್ನಲು ಬೇಗಿಹಳ್ಳಿಯ ಅಂಗಡಿಯೊಂದಕ್ಕೆ ಬಂದಿದ್ದ. ಈ ವೇಳೆ ಅಂಗಡಿ ಮಾಲೀಕ ಎಗ್‌ರೈಸ್ ಖಾಲಿಯಾಗಿದೆ ಎಂದು ತಿಳಿಸಿದ್ದಾನೆ. ಇದರಿಂದ ಕೆರಳಿದ ಕನಕರಾಜು ಹಾಗೂ ಆತನ ಸಹಚರರು ಎಗ್‌ರೈಸ್ ಬೇಕೇಬೇಕೆಂದು ಗಲಾಟೆ ಆರಂಭಿಸಿದ್ದಾರೆ.

​ಇದೇ ಸಮಯದಲ್ಲಿ ಪಕ್ಕದ ಅಂಗಡಿಯಲ್ಲಿ ಪೇಂಟಿಂಗ್ ಕೆಲಸ ಮಾಡುತ್ತಿದ್ದ ಮಂಜುನಾಥ್ ಎಂಬುವವರು ಸ್ಥಳಕ್ಕೆ ಬಂದಿದ್ದಾರೆ. ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದ ಕನಕರಾಜು, ಏಕಾಏಕಿ ತನ್ನ ಬಳಿಯಿದ್ದ ತಲ್ವಾರ್‌ನಿಂದ ಅಮಾಯಕ ಮಂಜುನಾಥ್ ಅವರ ಮೇಲೆ ಭೀಕರವಾಗಿ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.

​ದಾಳಿಯ ತೀವ್ರತೆಗೆ ಮಂಜುನಾಥ್ ಅವರ ಬೆನ್ನು ಹಾಗೂ ಕೈ ಭಾಗಕ್ಕೆ ತೀವ್ರ ಗಾಯಗಳಾಗಿವೆ. ಘಟನೆ ನಡೆಸಿದ ತಕ್ಷಣ ಆರೋಪಿ ಕನಕರಾಜು ಹಾಗೂ ಆತನ ಸ್ನೇಹಿತರು ಸ್ಥಳದಿಂದ ಕಾಲ್ಕಿತ್ತಿದ್ದಾರೆ.

​ಪೊಲೀಸ್ ದೂರು:

ಘಟನೆ ಕುರಿತು ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದ್ದು, ಪರಾರಿಯಾಗಿರುವ ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.


Share News