Share News

ಕಾರ್ಕಳ: ತಾಲೂಕು ಕಚೇರಿ ಸಮೀಪದ ಮಕ್ಕಳ ಉದ್ಯಾನವನದ ಬಳಿ ಸುಮಾರು ಒಂದೂವರೆ ಯಿಂದ ಎರಡು ವರ್ಷ ಪ್ರಾಯದ ಗಂಡು ಕಡವೆಯೊಂದು ನಿಗೂಢವಾಗಿ ಮೃತಪಟ್ಟಿರುವ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ.

​ಕುಕ್ಕಂದೂರು ಗ್ರಾಮದ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಭಾಗದಿಂದ ಈ ಕಡವೆ ತಪ್ಪಿಸಿಕೊಂಡು ನಗರ ಪ್ರದೇಶಕ್ಕೆ ಬಂದಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

​ಘಟನೆಯ ವಿವರ:

ಮಂಗಳವಾರ ಬೆಳಿಗ್ಗೆ ಪಾರ್ಕ್‌ನಲ್ಲಿ ವಾಯುವಿಹಾರ ನಡೆಸುತ್ತಿದ್ದ ಸಾರ್ವಜನಿಕರು ಕಡವೆ ಸತ್ತು ಬಿದ್ದಿರುವುದನ್ನು ಗಮನಿಸಿ ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಅರಣ್ಯ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ.

​ಅರಣ್ಯ ಇಲಾಖೆ ಪರಿಶೀಲನೆ ವೇಳೆ ಕಡವೆಯ ತಲೆ ಹಾಗೂ ಕೊಂಬಿನ ಭಾಗದಲ್ಲಿ ಸಣ್ಣಪುಟ್ಟ ಗಾಯಗಳಿರುವುದು ಕಂಡುಬಂದಿದೆ. ಯಾವುದೋ ಭಯ ಅಥವಾ ಆತಂಕದಿಂದ ಕಡವೆಗೆ ಹೃದಯಾಘಾತ ಸಂಭವಿಸಿ ಮೃತಪಟ್ಟಿರುವ ಸಾಧ್ಯತೆಯಿದೆ ಎಂದು ಪ್ರಾಥಮಿಕವಾಗಿ ಪಶುವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

​ಕಡವೆಯ ಸಾವಿಗೆ ನಿಖರ ಕಾರಣ ತಿಳಿಯಲು ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದ್ದು, ವರದಿ ಬಂದ ಬಳಿಕವಷ್ಟೇ ಪ್ರಮುಖ ಕಾರಣ ಸ್ಪಷ್ಟವಾಗಲಿದೆ ಎಂದು ಕಾರ್ಕಳ ವಲಯ ಅರಣ್ಯಾಧಿಕಾರಿ (RFO) ಅರುಣ್ ತಿಳಿಸಿದ್ದಾರೆ.


Share News