Share News

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಪುಂಡರ ಅಟ್ಟಹಾಸ ಮಿತಿಮೀರಿದ್ದು, ಬೈಕ್‌ಗಳಲ್ಲಿ ಮಾಸ್ಕ್ ಧರಿಸಿ ಬಂದ ದುಷ್ಕರ್ಮಿಗಳ ತಂಡವೊಂದು ಸಾರ್ವಜನಿಕರ ಮೇಲೆ ಮಾರಕಾಸ್ತ್ರಗಳಿಂದ ಏಕಾಏಕಿ ದಾಳಿ ನಡೆಸಿ ಭೀತಿ ಹುಟ್ಟಿಸಿರುವ ಘಟನೆ ನಡೆದಿದೆ.

​ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯ ಉತ್ತರಹಳ್ಳಿ ಮುಖ್ಯ ರಸ್ತೆಯ ಅರಹಳ್ಳಿ ಗೇಟ್ ಬಳಿ ಭಾನುವಾರ ರಾತ್ರಿ 9 ಗಂಟೆಯ ಸುಮಾರಿಗೆ ಈ ರಕ್ತಸಿಕ್ತ ಘಟನೆ ಸಂಭವಿಸಿದೆ.

​ಘಟನೆಯ ವಿವರ:

ಮೂರು ಬೈಕ್‌ಗಳಲ್ಲಿ ಮಾಸ್ಕ್ ಧರಿಸಿ ಬಂದ ಆರೇಳು ಮಂದಿಯ ದುಷ್ಕರ್ಮಿಗಳ ಗುಂಪು, ನಡುರಸ್ತೆಯಲ್ಲಿ ಸಿಕ್ಕ ಸಿಕ್ಕವರ ಮೇಲೆ ಯಾವುದೇ ಕಾರಣವಿಲ್ಲದೆ ಭೀಕರ ಹಲ್ಲೆ ನಡೆಸಿದೆ. ಮೊದಲು ರಸ್ತೆಬದಿಯಲ್ಲಿ ನಿಂತಿದ್ದ ಕಿರಣ್ ಹಾಗೂ ಆತನ ಸ್ನೇಹಿತನ ಮೇಲೆ ದಾಳಿ ನಡೆಸಿದ ಪುಂಡರು, ಕೆಲ ನಿಮಿಷಗಳ ಬಳಿಕ ಹತ್ತಿರದ ಮೀನು ಅಂಗಡಿ ಬಳಿ ತೆರಳಿ ಅಲ್ಲಿದ್ದ ಮತ್ತಿಬ್ಬರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ.

​ದುಷ್ಕರ್ಮಿಗಳ ಈ ಕೃತ್ಯದಿಂದಾಗಿ ಪ್ರದೇಶದಲ್ಲಿ ಕೆಲಕಾಲ ತೀವ್ರ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ನಾಲ್ವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆಯ ನಂತರ ಮೂವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಪ್ರಸ್ತುತ ಒಬ್ಬ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

​ವಿಶೇಷ ಪಡೆ ರಚನೆ:

ಘಟನಾ ಸ್ಥಳಕ್ಕೆ ಸುಬ್ರಹ್ಮಣ್ಯಪುರ ಪೊಲೀಸರು ಹಾಗೂ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಬೆಂಗಳೂರು ನೈಋತ್ಯ ವಿಭಾಗದ ಡಿಸಿಪಿ ಡಾ. ಎಸ್.ಕೆ. ಸೌಮ್ಯಲತಾ, “ಯಾವುದೇ ಬಲವಾದ ಕಾರಣವಿಲ್ಲದೆ ಸಾರ್ವಜನಿಕರ ಮೇಲೆ ಏಕಾಏಕಿ ದಾಳಿ ನಡೆಸಿರುವುದು ಕಂಡುಬಂದಿದೆ. ಈಗಾಗಲೇ ನಾಲ್ವರು ಆರೋಪಿಗಳ ಬಗ್ಗೆ ಪ್ರಮುಖ ಸುಳಿವು ಸಿಕ್ಕಿದ್ದು, ಅವರನ್ನು ಶೀಘ್ರವೇ ಬಂಧಿಸಲು ಸುಬ್ರಹ್ಮಣ್ಯಪುರ ಠಾಣೆ ಪೊಲೀಸರ ನೇತೃತ್ವದಲ್ಲಿ 3 ವಿಶೇಷ ತಂಡಗಳನ್ನು ರಚಿಸಿ ತನಿಖೆ ಚುರುಕುಗೊಳಿಸಲಾಗಿದೆ” ಎಂದು ತಿಳಿಸಿದ್ದಾರೆ.


Share News