ಯಲಹಂಕ / ಬೆಂಗಳೂರು: ಮುಂಬರುವ ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಹಾಗೂ ಗಣೇಶೋತ್ಸವ ಆಯೋಜಕರ ನಡುವೆ ಸಮನ್ವಯ ಮತ್ತು ಸುರಕ್ಷತಾ ಸಭೆ ಜರುಗಿತು.
ಹಬ್ಬದ ಅವಧಿಯಲ್ಲಿ ಪೊಲೀಸ್ ಇಲಾಖೆ ಮತ್ತು ಆಯೋಜಕರ ನಡುವೆ ಉತ್ತಮ ಸಮನ್ವಯ ಸಾಧಿಸಲು ಹಾಗೂ ತುರ್ತು ಸಂದರ್ಭಗಳಲ್ಲಿ ತ್ವರಿತ ಮಾಹಿತಿ ವಿನಿಮಯಕ್ಕಾಗಿ ನೋಂದಾಯಿತ ಸ್ವಯಂಸೇವಕರಿಗೆ (Volunteers) ವಿಶೇಷ ಗುರುತಿನ ಚೀಟಿ (ID Card) ನೀಡಲು ತೀರ್ಮಾನಿಸಲಾಗಿದೆ.
ಉತ್ತಮ ಆಯೋಜಕರಿಗೆ ಪ್ರಶಂಸನಾ ಪತ್ರ:
ಕಾನೂನು ಪಾಲನೆ, ಶಾಂತಿ-ಸೌಹಾರ್ದತೆ ಹಾಗೂ ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಭಕ್ತಿಪೂರ್ವಕವಾಗಿ ಹಬ್ಬವನ್ನು ಯಶಸ್ವಿಯಾಗಿ ಆಯೋಜಿಸುವ ಸಮಿತಿಗಳಿಗೆ ‘ಉತ್ತಮ ಗಣೇಶೋತ್ಸವ ಆಯೋಜಕರು’ ಎಂದು ಗುರುತಿಸಿ ಪ್ರಶಂಸನಾ ಪತ್ರ ನೀಡಲಾಗುವುದು. ಈ ಕುರಿತು ಆಯೋಜಕರಿಗೆ ಅಗತ್ಯ ಮಾರ್ಗದರ್ಶನ ಮತ್ತು ಲಿಖಿತ ಸೂಚನೆಗಳನ್ನು ನೀಡಲಾಗುತ್ತದೆ.
ಬೀಟ್ ಪುಸ್ತಕ ಹಾಗೂ ಸುರಕ್ಷತಾ ತಪಾಸಣೆ:
ಪ್ರತಿ ಗಣೇಶ ಮೂರ್ತಿ ಪ್ರತಿಷ್ಠಾಪನಾ ಸ್ಥಳದಲ್ಲಿ ಬೀಟ್ ಪುಸ್ತಕವನ್ನು ಇರಿಸಲಾಗುತ್ತದೆ. ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ನಿಯಮಿತವಾಗಿ ಸ್ಥಳಕ್ಕೆ ಭೇಟಿ ನೀಡಿ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಲಿದ್ದಾರೆ. ಯಾವುದೇ ಧರ್ಮ, ಸಮುದಾಯ ಅಥವಾ ವ್ಯಕ್ತಿಗಳ ಭಾವನೆಗಳಿಗೆ ಧಕ್ಕೆ ತರುವಂತಹ ಆಕ್ಷೇಪಾರ್ಹ ಪೋಸ್ಟರ್, ಬ್ಯಾನರ್ ಅಥವಾ ಬಂಟಿಂಗ್ಸ್ಗಳನ್ನು ಅಳವಡಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದ್ದು, ಪರಸ್ಪರ ಗೌರವದೊಂದಿಗೆ ಹಬ್ಬ ಆಚರಿಸಲು ಸೂಚಿಸಲಾಗಿದೆ.
ಸಾರ್ವಜನಿಕರ ಸಹಕಾರ ಅಗತ್ಯ – ಶಾಸಕ ವಿಶ್ವನಾಥ್:
ಸಭೆಯಲ್ಲಿ ಮಾತನಾಡಿದ ಯಲಹಂಕ ಕ್ಷೇತ್ರದ ಶಾಸಕ ಶ್ರೀ ಎಸ್.ಆರ್. ವಿಶ್ವನಾಥ್ ಅವರು, “ಎಲ್ಲರೂ ಒಗ್ಗೂಡಿ ಗಣೇಶ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸೋಣ. ಮೆರವಣಿಗೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ. ಮುಂದಿನ ದಿನಗಳಲ್ಲಿ ಪೊಲೀಸರ ಉಪಸ್ಥಿತಿಯ ಅಗತ್ಯವೇ ಇಲ್ಲದಂತೆ ಸಾರ್ವಜನಿಕರೇ ಸ್ವಯಂಪ್ರೇರಿತರಾಗಿ ಸುರಕ್ಷಿತವಾಗಿ ಹಬ್ಬ ಆಚರಿಸುವ ವಾತಾವರಣ ನಿರ್ಮಾಣವಾಗಬೇಕು” ಎಂದರು.
ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದಲ್ಲಿ ಸಾರ್ವಜನಿಕರು ಕಾನೂನನ್ನು ಕೈಗೆತ್ತಿಕೊಳ್ಳದೆ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ ಸಹಕರಿಸಬೇಕೆಂದು ಮನವಿ ಮಾಡಿದರು.

Arakshakara Times Media
Related posts
