ಕೋಲಾರ: ಮದುವೆಯಾಗುವುದಾಗಿ ಭರವಸೆ ನೀಡಿ ಕೊನೆಕ್ಷಣದಲ್ಲಿ ವಂಚಿಸಿದ್ದಾರೆ ಎಂದು ಆರೋಪಿಸಿ 25 ವರ್ಷದ ಯುವತಿಯೊಬ್ಬರು ಪ್ರಿಯಕರನ ಮನೆ ಎದುರು ಮೌನ ಪ್ರತಿಭಟನೆ ನಡೆಸಿದ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಹನುಮನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮಾಲೂರು ತಾಲ್ಲೂಕಿನ ಚಿಕ್ಕಕಡತೂರು ಗ್ರಾಮದ ಶಿವರಂಜನಿ (25) ಪ್ರತಿಭಟನೆ ನಡೆಸಿದ ಯುವತಿಯಾಗಿದ್ದು, ಹನುಮನಾಯಕನಹಳ್ಳಿ ಗ್ರಾಮದ ಪೃಥ್ವಿರಾಜ್ (24) ಎಂಬ ಯುವಕನ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಯುವತಿಯ ಪ್ರತಿಭಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.
ಇನ್‌ಸ್ಟಾಗ್ರಾಂ ಮೂಲಕ ಪರಿಚಯ ಹಾಗೂ ಪ್ರೀತಿ:
ಸಂತ್ರಸ್ಥೆ ಶಿವರಂಜನಿ ಅವರ ಆರೋಪದ ಪ್ರಕಾರ, ಇನ್‌ಸ್ಟಾಗ್ರಾಂ (Instagram) ಮೂಲಕ ಪೃಥ್ವಿರಾಜ್ ಪರಿಚಯವಾಗಿದ್ದರು. ದಿನಕಳೆದಂತೆ ಇವರ ನಡುವಿನ ಸ್ನೇಹ ಪ್ರೀತಿಯಾಗಿ ಬದಲಾಗಿತ್ತು. ಈ ವೇಳೆ ಪೃಥ್ವಿರಾಜ್ ತನನ್ನು ಪ್ರೀತಿಸಿ ಮದುವೆಯಾಗುವುದಾಗಿ ಭರವಸೆ ನೀಡಿದ್ದ. ಆದರೆ, ಬಳಿಕ ಜಾತಿ ವಿಚಾರವಾಗಿ ತಗಾದೆ ತೆಗೆದು ಇದೀಗ ತನ್ನನ್ನು ಕೈಬಿಟ್ಟಿದ್ದಾನೆ ಎಂದು ಯುವತಿ ದೂರಿದ್ದಾರೆ.
ಅಲ್ಲದೆ, ಪೃಥ್ವಿರಾಜ್ ತಮ್ಮ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದಾರೆ ಎಂದು ಆರೋಪಿಸಿರುವ ಯುವತಿ, ತನಗೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿ ಪ್ರಿಯಕರನ ಮನೆ ಮುಂದೆ ಕುಳಿತು ಮೌನ ಧರಣಿ ನಡೆಸಿದರು.
ಸ್ಥಳಕ್ಕೆ ಪೊಲೀಸರ ಭೇಟಿ:
ಯುವತಿ ಪ್ರತಿಭಟನೆ ನಡೆಸುತ್ತಿರುವ ಬಗ್ಗೆ ಮಾಹಿತಿ ಲಭಿಸುತ್ತಿದ್ದಂತೆ ಎಚ್ಚೆತ್ತ ಮಾಲೂರು ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಅಧಿಕೃತ ಹೇಳಿಕೆ ಹಾಗೂ ಮುಂದಿನ ತನಿಖೆಯ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದ್ದು, ಯುವತಿಯ ಆರೋಪಗಳ ಕುರಿತು ಪೃಥ್ವಿರಾಜ್ ಅವರ ಪ್ರತಿಕ್ರಿಯೆ ಕೂಡ ಲಭ್ಯವಾಗಬೇಕಿದೆ.
Arakshakara Times Media
Related posts
