Share News

ಮಂಡ್ಯ: ನಾಲೆಯಲ್ಲಿ ಈಜಲು ತೆರಳಿದ್ದ ಬಾಲಕನೊಬ್ಬನ ಮೇಲೆ ಮೊಸಳೆ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಪಾಲಹಳ್ಳಿ ಬಳಿಯ ವಿರಿಜಾ ನಾಲೆಯಲ್ಲಿ ನಡೆದಿದೆ.

​ಮಹಾರಾಷ್ಟ್ರ ಮೂಲದ ವಿಶಾಲ್ ರಾವತ್ (13) ಮೊಸಳೆ ದಾಳಿಗೊಳಗಾದ ಬಾಲಕ. ಈತನ ಕುಟುಂಬ ಕಬ್ಬು ಕಡಿಯುವ ಕೆಲಸಕ್ಕಾಗಿ ಇಲ್ಲಿಗೆ ಆಗಮಿಸಿತ್ತು.

​ಘಟನೆಯ ವಿವರ:

ವಿಶಾಲ್ ರಾವತ್ ಮಂಗಳವಾರ ಸಂಜೆ ತನ್ನ ಸ್ನೇಹಿತರೊಂದಿಗೆ ವಿರಿಜಾ ನಾಲೆಗೆ ಈಜಲು ತೆರಳಿದ್ದಾಗ ದಿಢೀರನೆ ಮೊಸಳೆ ದಾಳಿ ಮಾಡಿದೆ. ಈ ವೇಳೆ ಜೊತೆಯಲ್ಲಿದ್ದ ಸ್ನೇಹಿತರು ಧೈರ್ಯ ಹಾಗೂ ಸಮಯಪ್ರಜ್ಞೆ ಮೆರೆದು, ಕೈಗೆ ಸಿಕ್ಕ ಕಲ್ಲು ಮತ್ತು ಕಟ್ಟಿಗೆಗಳಿಂದ ಮೊಸಳೆಯ ಮೇಲೆ ದಾಳಿ ನಡೆಸಿ ಅದನ್ನು ಓಡಿಸುವ ಮೂಲಕ ವಿಶಾಲ್‌ನನ್ನು ಸಾವು-ಬದುಕಿನ ನಡುವಿನಿಂದ ರಕ್ಷಿಸಿದ್ದಾರೆ.

​ಆಸ್ಪತ್ರೆಗೆ ದಾಖಲು & ಅರಣ್ಯಾಧಿಕಾರಿಗಳ ಭೇಟಿ:

ದಾಳಿಯಿಂದ ತೀವ್ರವಾಗಿ ಗಾಯಗೊಂಡ ಬಾಲಕನನ್ನು ತಕ್ಷಣವೇ ಮೈಸೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪಕ್ಕದಲ್ಲೇ ಇರುವ ರಂಗನತಿಟ್ಟು ಪಕ್ಷಿಧಾಮದಿಂದ ಈ ಮೊಸಳೆ ನಾಲೆಗೆ ಬಂದಿರಬಹುದು ಎಂದು ಶಂಕಿಸಲಾಗಿದೆ.

​ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಆಸ್ಪತ್ರೆಗೆ ತೆರಳಿ ಬಾಲಕನ ಆರೋಗ್ಯ ವಿಚಾರಿಸಿದ ಅಧಿಕಾರಿಗಳು ಘಟನೆ ಹಾಗೂ ಮೊಸಳೆ ಕುರಿತು ಮಾಹಿತಿ ಪಡೆದಿದ್ದಾರೆ. ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಟಿಯಿಂದ ನಾಲೆಯಲ್ಲಿರುವ ಮೊಸಳೆಯನ್ನು ಸೆರೆಹಿಡಿಯಲು ಇಂದು ಕಾರ್ಯಾಚರಣೆ (ಕೂಬಿಂಗ್) ನಡೆಸಲು ಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ.

​ಈ ಕುರಿತು ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.


Share News